ರಾಸಾಯನಿಕ ಮುಕ್ತ ಕುಂಕುಮ

ರಾಸಾಯನಿಕ ಮುಕ್ತ ಕುಂಕುಮ

ಬೆಂಗಳೂರು, ಅ. 25: ರಾಜ್ಯದ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲ ದೇವಾಲಯಗಳಲ್ಲೂ ರಾಸಾಯನಿಕ ಮಿಶ್ರಿತ ಕುಂಕುಮಕ್ಕೆ ನಿಷೇಧ ಹೇರಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಮುಜರಾಯಿ ಇಲಾಖೆಯ ಅಧೀನದಲ್ಲಿ 34559 ದೇಗುಲಗಳಿದ್ದು, ಇದರಲ್ಲಿ 175 ದೇವಾಲಯಗಳು ಎ ದರ್ಜೆ (ವಾರ್ಷಿಕ ಆದಾಯ ರೂ.25 ಲಕ್ಷ) 163 ದೇವಾಲಯಗಳು ಬಿ ದರ್ಜೆ (ವಾರ್ಷಿಕ ಆದಾಯ ರೂ.5 ಲಕ್ಷದಿಂದ 25 ಲಕ್ಷ) 34221 ಸಿ ದರ್ಜೆ (ವಾರ್ಷಿಕ ಆದಾಯ ರೂ.5 ಲಕ್ಷ) ದೇವಾಲಯಗಳಿವೆ. ರಾಜ್ಯದಲ್ಲಿರುವ ಬಹುತೇಕ ದೇವಾಲಯಗಳಲ್ಲಿ ಬಟ್ಟಲಿನಲ್ಲಿ ಕುಂಕುಮವನ್ನು ಇರಿಸಲಾಗಿರುತ್ತದೆ. ಮತ್ತೆ ಕೆಲವು ದೇಗುಲಗಳಲ್ಲಿ ಪ್ರಸಾದದೊಂದಿಗೆ ಪಟ್ಟಣದಲ್ಲಿ ಕುಂಕುಮವನ್ನು ನೀಡಲಾಗುತ್ತಿದೆ.

ರಾಸಾಯನಿಕ ಕುಂಕುಮದ ಬಣ್ಣ ಗಾಢವಾಗಿರಲಿದ್ದು, ಚರ್ಮ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಿರ್ಲಕ್ಷಿಸಿದರೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇಂತಹ ಕುಂಕುಮವನ್ನು ಹಚ್ಚಿಕೊಂಡ ಭಾಗದಲ್ಲಿ ಕೆರೆತ, ಸಣ್ಣ ನೀರಿನ ಗುಳ್ಳೆ ಕಾಣಿಸಿಕೊಳ್ಳುತ್ತವೆ. ಇಂತಹ ಕುಂಕುಮಗಳಿಂದ ಜೀವಕಣಗಳೂ ಕೂಡ ನಾಶವಾಗಿ ಕ್ರಮೇಣ ಆ ಭಾಗ ಬೆಳ್ಳಗಾಗುತ್ತವೆ.

ರಾಸಾಯನಿಕ ಮಿಶ್ರಿತ ಕುಂಕುಮದಿಂದ ಸಮಸ್ಯೆಯನ್ನು ಎದುರಿಸುತ್ತಿರುವ ಹಲವಾರು ಭಕ್ತರು ಮುಜರಾಯಿ ಇಲಾಖೆಗೆ ಸಾಕಷ್ಟು ಬಾರಿ ದೂರುಗಳನ್ನು ಸಲ್ಲಿಸಿದ್ದಾರೆ. ಕುಂಕುಮದ ಬಣ್ಣದಿಂದಲೇ ಅದು ರಾಸಾಯನಿಕವೋ, ಅಲ್ಲವೋ ಎಂಬುದನ್ನು ಕಂಡು ಹಿಡಿಯಬಹುದು. ಅನುಮಾನ ಬಂದರೆ ದೇವಾಲಯದ ಕುಂಕುಮವನ್ನು ಆಹಾರ ಸುರಕ್ಷತಾ ಇಲಾಖೆಗೆ ಪರೀಕ್ಷೆಗೆ ಕಳುಹಿಸಬಹುದು. ರಾಸಾಯನಿಕ ಕಂಡು ಬಂದಿದ್ದೇ ಆದರೆ, ತಯಾರಿಕರ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos