IPL 2024 ಆವೃತ್ತಿ ತಂಡಗಳ ನಾಯಕರುಗಳ ಪಟ್ಟಿ ಬಿಡುಗಡೆ

IPL 2024 ಆವೃತ್ತಿ ತಂಡಗಳ ನಾಯಕರುಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.  ಭಾರತದ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 22ರಂದು ಆರಂಭವಾಗಲಿದ್ದು, ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಈಗಾಗಲೇ ಎಲ್ಲಾ ತಂಡಗಳ ನಾಯಕರುಗಳು ಫೈನಲ್ ಆಗಿದ್ದು, ಅದರಂತೆ ಮೂರು ತಂಡಗಳಲ್ಲಿ ಹೊಸ ಕ್ಯಾಪ್ಟನ್​ಗಳು ಕಾಣಿಸಿಕೊಳ್ಳಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಕೂಡ ಸಿಎಸ್​ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ರವೀಂದ್ರ ಜಡೇಜಾ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವನ್ನು ಈ ಬಾರಿ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಕಳೆದ ಬಾರಿ ನಾಯಕರಾಗಿದ್ದ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಬದಲಿಗೆ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ.

ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ಪಂತ್ ಅವರ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ಬಾರಿ ರಿಷಭ್ ಪಂತ್ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖಚಿತಪಡಿಸಿದೆ.

ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದಿಂದ ಐಡೆನ್ ಮಾರ್ಕ್ರಾಮ್ ಅವರನ್ನು ಕೆಳಗಿಳಿಸಲಾಗಿದ್ದು, ಅವರ ಬದಲಿಗೆ ಹೊಸ ಕ್ಯಾಪ್ಟನ್ ಆಗಿ ಪ್ಯಾಟ್ ಕಮಿನ್ಸ್ ಅವರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಈ ಬಾರಿ ಎಸ್​ಆರ್​ಹೆಚ್ ತಂಡವನ್ನು ಕಮಿನ್ಸ್ ಮುನ್ನಡೆಸಲಿದ್ದಾರೆ.

ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ಅಯ್ಯರ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ಕೆಕೆಆರ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಅಯ್ಯರ್ ಈ ಬಾರಿ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಈ ಬಾರಿ ಕೂಡ ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡವನ್ನು ಈ ಬಾರಿ ಶುಭ್​ಮನ್ ಗಿಲ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದು, ಹೀಗಾಗಿ ಗಿಲ್ ಅವರಿಗೆ ಗುಜರಾತ್ ತಂಡದ ನಾಯಕತ್ವ ನೀಡಲಾಗಿದೆ.

ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಈ ಬಾರಿ ಕೂಡ ಶಿಖರ್ ಧವನ್ ಕಾಣಿಸಿಕೊಳ್ಳಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಈ ಬಾರಿ ಕೂಡ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕರಾಗಿ ನಿಕೋಲಸ್ ಪೂರನ್ ಕಾಣಿಸಿಕೊಳ್ಳಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫಾಫ್ ಡುಪ್ಲೆಸಿಸ್ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಹಾಗೆಯೇ ಉಪನಾಯರಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos