ಪಕ್ಷೇತರರಾಗಿ ಸುಮಲತಾ ಅಂಬರೀಶ್ ಸ್ಪರ್ಧೆ

ಪಕ್ಷೇತರರಾಗಿ ಸುಮಲತಾ ಅಂಬರೀಶ್ ಸ್ಪರ್ಧೆ

ಬೆಂಗಳೂರು, ಮಾ.18, ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ರೆಬಲ್‍ಸ್ಟಾರ್ ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ. ಇದೇ 20ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯದಲ್ಲಿ ಅಂಬರೀಶ್ ಅವರ ಅಭಿಮಾನಿಗಳು, ನನ್ನ ಹಿತೈಷಿಗಳ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ನನಗೆ ಸೋಲು-ಗೆಲುವು ಮುಖ್ಯವಲ್ಲ. ಮಂಡ್ಯ ಜನತೆಯ ಋಣ ತೀರುಸುವುದಕ್ಕಾಗಿ ನನ್ನ ಸ್ಪರ್ಧೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ವೈಯಕ್ತಿಕವಾಗಿ ನನಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳಿದರು. ನನಗೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ದೊಡ್ಡ ದೊಡ್ಡ ಹಣದ ಆಮಿಷಗಳನ್ನು ನೀಡಲಾಗಿತ್ತು. ಬೇರೆ ಬೇರೆ ರಾಜಕೀಯ ಸ್ಥಾನಮಾನ ಕೊಡುವುದಾಗಿಯೂ ಆಶ್ವಾಸನೆ ಬಂದಿತ್ತು. ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಅಂಬರೀಶ್ ಅವರ ಕನಸುಗಳನ್ನು ನನಸು ಮಾಡಬೇಕೆಂಬ ಒಂದೇ ಕಾರಣಕ್ಕಾಗಿ ಸ್ಪರ್ಧಿಸುತ್ತಿದ್ದೇನೆ. ನನ್ನ ಮುಂದೆ ಎಂಥಹ ಸವಾಲುಗಳು ಇವೆ ಎಂಬುದು ಗೊತ್ತು ಎಂದರು. ನಮ್ಮ ಕುಟುಂಬ ಯಾವಾಗಲೂ ರೈತರಿಗೆ ಸ್ಪಂದಿಸಿದೆ. ಕಷ್ಟ ಎಂದು ಕೇಳಿ ಬಂದವರಿಗೆ ಅಂಬರೀಶ್ ಎಂದಿಗೂ ಬರಿಗೈಯಲ್ಲಿ ಕಳುಹಿಸಿಲ್ಲ. ನಮ್ಮ ಕೈಲಾದಷ್ಟು ಸೇವೆ, ಸಹಕಾರ ಮಾಡಿದ್ದೇವೆ. ಆದರೆ, ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬುದು ಅಂಬರೀಶ್ ಅವರ ನಿಲುವಾಗಿತ್ತು ಎಂದರು. ನಮ್ಮ ಕುಟುಂಬದವರು ರಾಜಕಾರಣಕ್ಕೆ ಬರಬಾರದು ಎಂಬ ಅವರ ಅಭಿಲಾಷೆಯಾಗಿತ್ತು.

ಅದೇ ರೀತಿ ನಾವು ನಡೆದುಕೊಂಡೆವು. ಬೇರೆಯವರಿಗೆ ಸಾಮಥ್ರ್ಯ ಇದ್ದರೆ ಬೆಳೆಯಲಿ ಎಂಬ ಇಚ್ಚೆ ಹೊಂದಿದ್ದರು. ನಾವು ಯಾವೊತ್ತೂ ಕುಟುಂಬ ರಾಜಕಾರಣವನ್ನು ಮಾಡಲಿಲ್ಲ. ದೇವರ ಇಚ್ಚೆ, ಜನರ ಆಶೀರ್ವಾದ, ಅಂಬಿ ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇನೆ. ಈಗಾಗಲೇ ಮಂಡ್ಯದಲ್ಲಿ ಅನೇಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ, ಎಲ್ಲೆಲ್ಲೂ ಜನರು ಹೇಳುತ್ತಿರುವುದು ಒಂದೇ ಮಾತು ನೀವು ಚುನಾವಣೆಗೆ ನಿಂತು ಅಂಬರೀಶ್ ಅವರ ಕನಸುಗಳನ್ನು ನನಸು ಮಾಡಬೇಕು. ಎಲ್ಲಾ ರೀತಿಯ ಸಹಕಾರ ನೀಡಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನನ್ನ ಸಹೋದರನಂತಿರುವ ರಾಕ್‍ಲೈನ್ ವೆಂಕಟೇಶ್, ದೊಡ್ಡಮಗನಂತಿರುವ ದರ್ಶನ, ಚಿಕ್ಕ ಮಗನಂತಿರುವ ಯಶ್ ಸಂಪೂರ್ಣ ಸಹಕಾರ ನೀಡುವುದಾಗಿ ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ. ಎಲ್ಲಾ ಚಿತ್ರರಂಗದವರ ಬೆಂಬಲ ನನಗೆ ಇದೆ. ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಈ ಚುನಾವಣೆಯಲ್ಲಿ ವೈಯಕ್ತಿಕ ಆರೋಪ-ಪ್ರತ್ಯಾರೋಪ ಮಾಡುವುದು ನನಗೆ ಇಷ್ಟವಿಲ್ಲ. ನಮ್ಮ ಎದುರಾಳಿಗಳನ್ನೂ ಕೂಡ ಗೌರವಯುತವಾಗಿ ನಡೆಸಿಕೊಳ್ಳಬೇಕು. ಯುವಕರಿಗೆ ನಾವು ಮಾದರಿಯಾಗಬೇಕಾದ ಅಗತ್ಯವಿದೆ.

ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದವರ ಬೆಂಬಲ ಕೇಳಿದ್ದೇನೆ. ಹಿರಿಯರಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯನವರ ಸಹಕಾರವನ್ನೂ ಕೋರಿದ್ದೇನೆ. ಮಂಡ್ಯದಲ್ಲಿ ಕಾಂಗ್ರೆಸ್‍ಗೆ ಒಂದು ಗಟ್ಟಿಯಾದ ಧ್ವನಿ ಬೇಕು. ಅಲ್ಲಿ ಸಾವಿರಾರು ಕಾರ್ಯಕರ್ತರು ಒಂದಿಲ್ಲೊಂದು ರೀತಿಯ ಕಷ್ಟ ಎದುರಿಸುತ್ತಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಅಂಬರೀಶ್ ಬದುಕಿರುವವರೆಗೂ ಯಾರೊಬ್ಬರಿಗೂ ತೊಂದರೆ ಕೊಟ್ಟಿಲ್ಲ. ಅದೆ ಪ್ರೀತಿ, ಗೌರವ ಇಟ್ಟುಕೊಂಡಿದ್ದೇವೆ. ಯಾವುದೇ ಒತ್ತಡ ಬಂದರೂ ನಾನು ಸ್ಪರ್ಧಾಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮಂಡ್ಯದ ಜನತೆಗಾಗಿ ತೆಗೆದುಕೊಂಡಿರುವ ದೃಢ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ, ನಟರಾದ ದರ್ಶನ್, ಯಶ್, ಅಂಬರೀಶ್ ಪುತ್ರ ಅಭಿಷೇಕ ಮತ್ತಿತ್ತರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos