ಸುಳ್ವಾಡಿ ವಿಷಪ್ರಸಾದ ದುರಂತ: ಪ್ರಭಾವಿ ಮಠಗಳ ಕುತಂತ್ರಕ್ಕೆ ದಲಿತರೇ ಬಲಿಯಾಗಬೇಕಿತ್ತಾ?

  • In State
  • January 12, 2019
  • 327 Views
ಸುಳ್ವಾಡಿ ವಿಷಪ್ರಸಾದ ದುರಂತ: ಪ್ರಭಾವಿ ಮಠಗಳ ಕುತಂತ್ರಕ್ಕೆ ದಲಿತರೇ ಬಲಿಯಾಗಬೇಕಿತ್ತಾ?

ಚಾಮರಾಜನಗರ: ಸುಳ್ವಾಡಿಯಲ್ಲಿ ನಡೆದ ವಿಷಪ್ರಸಾದ ದುರಂತದಲ್ಲಿ ಸತ್ತವರ ಪೈಕಿ 9 ಮಂದಿ ದಲಿತರು(ಮಾದಿಗ). ಇಬ್ಬರು ಬೋವಿ ಸಮುದಾಯದವರು. ಉಳಿದವರು ಲಂಬಾಣಿ ಮತ್ತು ಹಿಂದುಳಿದ ವರ್ಗದವರು. ಇಷ್ಟಾದರೂ ಆ ಭಾಗದ ಶಾಸಕರಾದ ಮಹೇಶ್ ಮೊನ್ನೆ ಮುಗಿದ ವಿಧಾನಸಭೆ ಅಧಿವೇಶನದಲ್ಲಿ ಒಂದು ಚಕಾರ ಎತ್ತಲಿಲ್ಲ.

ಇನ್ನು ಆ ಭಾಗದ ದಲಿತ ಮುಖಂಡರು, ನಾಯಕರು, ರಾಜಕೀಯ ನಾಯಕರುಗಳು ಈ ಬಗ್ಗೆ ಮಾತನಾಡಿ ನೊಂದವರಿಗೆ ಪರಿಹಾರ ಹೆಚ್ಚು ಮಾಡಬೇಕು ಎನ್ನುವ ಆಗ್ರಹವೂ ಆಗಲಿಲ್ಲ. ಅವರ ಕುಟುಂಬಗಳನ್ನು ಸರ್ಕಾರ ದತ್ತು ತೆಗೆದುಕೊಂಡು ಕಾಪಾಡಬೇಕು ಎನ್ನುವ ಪ್ರಯತ್ನ ಮಾಡಲಿಲ್ಲ.  ಏಕೆಂದರೆ ಅವರಿಗೆ ಆ ವಿಷ ಪ್ರಸಾದ ದುರಂತದ ಒಳ ನೋವು ಗೊತ್ತಿಲ್ಲ. ಅಚ್ಚರಿ ಎಂದರೆ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಇನ್ನೂ ಹತ್ತು ಮಂದಿ ಗೂ ಹೆಚ್ಚು ಜನ ನರಳಾಡುತ್ತಿದ್ದಾರೆ.

ಅವರಿಗೆ ಹಾಕಿರುವ ಕೃತಕ ಉಸಿರಾಟ ತೆಗೆದರೆ ಪ್ರಾಣ ಹೋಗುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ ಇವರು ಉಳಿಯುವುದು ಕಷ್ಟ. ಬದುಕಿದರೂ ಅವರು ಆಸ್ಪತ್ರೆಯಿಂದ ಹೊರ ಬಂದರೆ ಅವರ ಜೀವನ ಇನ್ನೂ ದೊಡ್ಡ ನರಕವಾಗುತ್ತದೆ.  ಇಂಥ ಘೋರ ದುರಂತ ಎಸಗಿದವರು ಮೇಲುವರ್ಗದವರು. ಅವರು ಯಾರು ಅಂತ ನಿಮಗೆಲ್ಲ ಚೆನ್ನಾಗಿ ಗೊತ್ತಿದೆ. ಆರೋಪಿಗಳನ್ನು ಉಳಿಸಲು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ನಾಶಮಾಡಲು ಪ್ರಭಾವಿ ಮಠಗಳು ಮತ್ತು ಮೇಲ್ಜಾತಿಯ ಸಮುದಾಯಗಳ ನಾಯಕರು ಸದ್ದಿಲ್ಲದೆ ಕಸರತ್ತು ನಡೆಸುತ್ತಿದ್ದಾರೆ.

ಇದರ ಫಲವಾಗಿ ಇನ್ನು ಕೆಲವೇ ದಿನಗಳಲ್ಲಿ ಆರೋಪಿ ಸ್ವಾಮೀಜಿ ಮತ್ತು ಅವನ ತಂಡ ಜೈಲಿನಿಂದ ಹೊರ ಬಂದರೂ ಆಶ್ಚರ್ಯವಿಲ್ಲ. ಆನಂತರ ಪ್ರಕರಣದ ಸಾಕ್ಷಾಧಾರಗಳ ಸಂಪೂರ್ಣ ನಾಶ ಮಾಡುವ ಕಾರ್ಯ ಆರಂಭವಾಗುತ್ತದೆ.  ಹೀಗಾಗಿಯೇ ಕಣ್ಣ ಮುಂದೆ ಬೆಂಕಿ ಹಚ್ಚಿ ಕೊಂದ ವರ್ಷಗಳ ಹಿಂದಿನ ಕಂಬಾಲಪಲ್ಲಿ ಪ್ರಕರಣ ಸಾಕ್ಷಿಗಳು ನಾಶವಾಯಿತು. ಆರೋಪಿಗಳು ಖುಲಾಸೆ ಆದರು. ತಾತ ಸಂತು ಕೊಲೆ ಮಾಡಿದವರು ಇಂದು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.

ಹೀಗಾಗಿ ದಲಿತ ಹೋರಾಟಗಾರರು ಮುಖಂಡರು ಜನಪ್ರತಿನಿಧಿಗಳು ವಿಷ ಪ್ರಸಾದ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಒತ್ತಾಯ ಮಾಡಬೇಕು. ಸಾವಿಗೀಡಾದವರ ಕುಟುಂಬಗಳಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಬೇಕು.  ಇದೆಲ್ಲಕ್ಕಿಂತ ಮುಖ್ಯವಾಗಿ ಆಸ್ಪತ್ರೆಗಳಲ್ಲಿ ನರಳುತ್ತಿರುವವರು ಒಂದು ವೇಳೆ ಬದುಕಿದರೆ ಜೀವನಕ್ಕೆ ಮತ್ತು ಅವರ ಕುಟುಂಬದ ಹೊಣೆಯನ್ನು ಸರ್ಕಾರ ಹೊತ್ತುಕೊಳ್ಳಬೇಕು. ಈ ಪ್ರಕರಣವನ್ನು ನಿರ್ಭಯ ಕೇಸ್ ಮಾದರಿಯಲ್ಲಿ ಪರಿಗಣಿಸಿ ರಾಷ್ಟ್ರವ್ಯಾಪಿ ದಲಿತರಲ್ಲಿ ಜಾಗೃತಿ ಮೂಡಿಸುವ ಕೆಲಸ ತುರ್ತು ಆಗಬೇಕಿದೆ.

ಸುಳ್ವಾಡಿ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದ 17 ಜನರು ಮೃತಪಟ್ಟ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಭಕ್ತರಿಗೆ ವಿಷ  ಉಣಿಸುವ ಮೂಲಕ ಖಾವಿಗೆ ಖಳಂಕ ತಂದಿದ್ದಾರೆ. ದುರಂತದಲ್ಲಿ ಸಾವಿಗೀಡಾದ ಮತ್ತು ಅಸ್ವಸ್ಥಗೊಂಡವರ ಕುಟುಂಬಗಳಿಗೆ ಸರ್ಕಾರ ಕೇವಲ 5 ಲಕ್ಷ ರೂ. ಪರಿಹಾರ ಮತ್ತು 6 ತಿಂಗಳ ಪಡಿತರ ನೀಡಿದರೆ ಸಾಲದು. ಅವರಿಗೆ ಶಾಶ್ವತ ಪರಿಹಾರವಾಗಿ ಜಮೀನು ಮತ್ತು ಸರ್ಕಾರಿ ನೌಕರಿ ಒದಗಿಸುವ ಮೂಲಕ ಜೀವನದಲ್ಲಿ ಅಭದ್ರತೆ ಕಾಡದಂತೆ ನೋಡಿಕೊಳ್ಳಬೇಕು

-ಶ್ರೀ ಜ್ಞಾನ ಪ್ರಕಾಶ್‍ ಸ್ವಾಮೀಜಿ, ಮೈಸೂರಿನ ಉರಿಲಿಂಗಿಪೆದ್ದಿ ಮಠ

ಫ್ರೆಶ್ ನ್ಯೂಸ್

Latest Posts

Featured Videos