ಶೇಂಗಾ ಖರೀದಿ ಕೇಂದ್ರ ಆರಂಭಿಸಿ

ಶೇಂಗಾ ಖರೀದಿ ಕೇಂದ್ರ ಆರಂಭಿಸಿ

ಹುಬ್ಬಳ್ಳಿ, ಜ. 14: ಅತಿವೃಷ್ಟಿ, ನೆರೆ ಮಧ್ಯೆಯೂ ಅಷ್ಟು ಇಷ್ಟು ಶೇಂಗಾ ಬೆಳೆದಿರುವ ರೈತರಿಗೆ ಸರಿಯಾದ ಬೆಲೆ ಸಿಗದೇ ಪರದಾಡುತ್ತಿದ್ದು, ಕೂಡಲೆ ಸರ್ಕಾರ ಬೆಂಬಲ ಬೆಲೆ ಶೇಂಗಾ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿ ಎಪಿಎಂಸಿ ಪದಾಧಿಕಾರಿಗಳು ಹಾಗೂ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಜ. 21ರೊಳಗೆ ಖರೀದಿ ಕೇಂದ್ರ ಆರಂಭಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 28 ಸಾವಿರ ಹೆಕ್ಟೇರ್ ಶೇಂಗಾ ಬಿತ್ತನೆಯಾಗಿತ್ತು. ಆದರೆ, ಪ್ರಕೃತಿ ವಿಕೋಪಕ್ಕೆ ಸಿಲುಕಿ ಇಳುವರಿ ಕಡಿಮೆಯಾಗಿದೆ. ಈ ಮಧ್ಯೆ ಮಾರುಕಟ್ಟೆಯಲ್ಲಿ ಶೇಂಗಾ ದರವೂ ಕಡಿಮೆಯಾಗಿದ್ದು, ಬೆಲೆ ಇಳಿಮುಖವಾಗಿಯೇ ಚಲಿಸುತ್ತಿದೆ.

ಪ್ರಸ್ತುತ ಕೇಂದ್ರ ಸರ್ಕಾರ ಶೇಂಗಾ (ಸಿಪ್ಪೆ ಸಹಿತ)ಕ್ಕೆ ಪ್ರತಿ ಕ್ವಿಂಟಾಲ್​ಗೆ 5090 ರೂ. ಬೆಂಬಲ ಬೆಲೆ ಘೋಷಿಸಿದೆ. ಆವಕ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ ಹೆಚ್ಚೆಂದರೆ 3500 ರೂ. ವರೆಗೆ ಬೆಲೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ನೀರಾವರಿ ಶೇಂಗಾ ಆವಕ ಹೆಚ್ಚುವ ಸಾಧ್ಯತೆ ಇದ್ದು, ಕೂಡಲೆ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಈ ವರ್ಷ ಬಹುತೇಕ ಬೆಳೆಗಳು ಕೈಕೊಟ್ಟಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕೈಗೆ ಬಂದಿರುವ ಶೇಂಗಾಕ್ಕಾದರೂ ಉತ್ತಮ ಬೆಲೆ ಸಿಗಬೇಕು. ಶೀಘ್ರ ಖರೀದಿ ಕೇಂದ್ರ ಶುರುವಾಗದಿದ್ದರೆ ಜ. 21ರಿಂದ ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಕಾಲವಾಡ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ, ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ, ಸದಸ್ಯರಾದ ಶಿವಯೋಗಿ ಮಂಟೂರಶೆಟ್ರ, ಸಹದೇವಪ್ಪ ಸುಡಕೇನವರ, ಬಸವರಾಜ ನಾಯ್ಕರ, ರೈತ ಮುಖಂಡರಾದ ಚಂದ್ರಶೇಖರ ಕಬ್ಬೂರ, ಕಲ್ಮೇಶ ಲಿಗಾಡಿ, ಇತರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos