ಶ್ರೀಲಂಕಾ ಬಾಂಬ್ ದಾಳಿ: “2014ರ ಹಿಂದೆ ಭಾರತದಲ್ಲಿದ್ದ ಪರಿಸ್ಥಿತಿ ನೆನಪಾಗುತ್ತಿದೆ…” ಮೋದಿ

ಶ್ರೀಲಂಕಾ ಬಾಂಬ್ ದಾಳಿ: “2014ರ ಹಿಂದೆ ಭಾರತದಲ್ಲಿದ್ದ ಪರಿಸ್ಥಿತಿ ನೆನಪಾಗುತ್ತಿದೆ…” ಮೋದಿ

ಮಹಾರಾಷ್ಟ್ರ, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಈಸ್ಟರ್​ ಸಂಭ್ರಮ ಶ್ರೀಲಂಕಾನ್ನರಿಗೆ ಕರಾಳ ದಿನವಾಗಿದೆ. ದೇವರ ಪ್ರಾರ್ಥನೆಯಲ್ಲಿದ್ದ ಜನರ ಮೇಲೆ ನಡೆಸಿದ ಈ ದಾಳಿಯಿಂದ ಚರ್ಚ್​ಗಳು, ಐಷಾರಾಮಿ ಹೋಟೆಲ್​ಗಳು ರಕ್ತಸಿಕ್ತವಾಗಿವೆ. ಕ್ರಿಶ್ಚಿಯನ್​ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿಗೆ ಇಡೀ ವಿಶ್ವವೇ ಖಂಡನೆ ವ್ಯಕ್ತಪಡಿಸಿದೆ. ಬಾಂಬ್​ ದಾಳಿಯಿಂದಾಗಿ ಪುಟ್ಟ ದ್ವೀಪರಾಷ್ಟ್ರ ಬೆಚ್ಚಿದ್ದು, ಎಲ್ಲೆಡೆ ಅನುಕಂಪದ ಅಲೆ ಕೇಳಿ ಬಂದಿದೆ. ಆದರೆ, ಈ ಘಟನೆಯನ್ನು ಬಳಸಿಕೊಂಡು ಪ್ರಧಾನಿ ಮೋದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ದಿನ್​ದೊರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಶ್ರೀಲಂಕಾ ಸ್ಪೋಟ ಘಟನೆಯನ್ನು  ಉಲ್ಲೇಖಿಸಿದ ಮೋದಿ, ಇಂತಹದೇ ಪರಿಸ್ಥಿತಿ 2014ಕ್ಕೂ ಮುಂಚೆ ಭಾರತದಲ್ಲಿತ್ತು ಎಂದಿದ್ದಾರೆ. “ಶ್ರೀಲಂಕಾದಲ್ಲಿ ನಿನ್ನೆ ಬಾಂಬ್​ ದಾಳಿ ನಡೆದಿದೆ. ಈಸ್ಟರ್​ ಹಬ್ಬದ ಸಂಭ್ರಮದಲ್ಲಿ ನಡೆದ ದಾಳಿಯಲ್ಲಿ ನೂರಾರು ಜನರು ಪ್ರಾಣ ಬಿಟ್ಟಿದ್ದಾರೆ. ದೇವರ ಪ್ರಾರ್ಥನೆ ಮಾಡುತ್ತಿದ್ದ  ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪರಿಸ್ಥಿತಿಯನ್ನು ನೋಡಿದರೆ, ನಾವು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಭಾರತದಲ್ಲಿದ್ದ ಪರಿಸ್ಥಿತಿ ನೆನಪಾಗುತ್ತಿದೆ” ಎಂದಿದ್ದಾರೆ. 2014ರ ಹಿಂದೆ ಭಾರತದಲ್ಲಿ ಎಂತಹ ಪರಿಸ್ಥಿತಿ ಇತ್ತು. ದೇಶದ ಯಾವುದೋ ಮೂಲೆಯಲ್ಲಿ ಇದೇ ರೀತಿಯ ಬಾಂಬ್​ ಸ್ಪೋಟಗಳು ಆಗುತ್ತಿದ್ದವು ಎಂದು ಪುಣೆ, ಮುಂಬೈ, ಗುಜರಾತ್​ನಲ್ಲಿ​ ನಡೆದ ದಾಳಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದರು. ಕಾಂಗ್ರೆಸ್​ ಹಾಗೂ ಎನ್​ಸಿಪಿ ವಿರುದ್ದ ನೇರವಾಗಿ ಹರಿಹಾಯ್ದ ಅವರು, “ಪಾಕಿಸ್ತಾನದ ಉಗ್ರರ ದಾಳಿಗೆ ಅವರು ಅಸಮರ್ಪಕ ಉತ್ತರ ನೀಡಿದ್ದರು. ಅಲ್ಲದೇ ಅವರು ಮೊಸಳೆ ಕಣ್ಣೀರು ಸುರಿಸಿದರು. ಸಂತಾಪ ಸಭೆಗಳನ್ನು ನಡೆಸಿ ಮರುಗಿದರು. ಈ ಪರಿಸ್ಥಿತಿ 2014ರ ಬಳಿಕ ಬದಲಾಯಿತು” ಎಂದರು. ಚೌಕಿದಾರ್​ ಕೈಗೆ ಅಧಿಕಾರ ನೀಡಿದ ಬಳಿಕ ಭಯೋತ್ಪಾದಕರ ಸೃಷ್ಟಿಸುತ್ತಿದ್ದ ಪಾಕಿಸ್ತಾನಕ್ಕೆ ನಾವು ತಕ್ಕ ಉತ್ತ ನೀಡಿದೆವು. ಇದರ ಫಲವಾಗಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಭಯೋತ್ಪಾದನೆಗೆ ನಿರ್ಬಂಧ ವಿಧಿಸಲಾಯಿತು ಎಂದರು. ಬಿಜೆಪಿ ಹಾಗೂ ಪ್ರಧಾನಿ ಮೋದಿ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರೀಯ ಭದ್ರತೆ ವಿಷಯವನ್ನು ಸಮರ್ಥವಾಗಿ ಬಳಸಿಕೊಂಡು ಬರುತ್ತಿದೆ. ಅದರಲ್ಲಿಯೂ ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನಕ್ಕೆ ಭಾರತ ನೀಡಿದ ಉತ್ತರವನ್ನು ಕಠಿಣ ಮತ್ತು ನಿರ್ಣಾಯಕ ಎಂದು ಬಿಂಬಿಸುತ್ತಿದೆ. ಭಾನುವಾರ ಗುಜರಾತ್​ನಲ್ಲಿ ನಡೆದ ಸಮಾವೇಶದಲ್ಲಿಯೂ ಕೂಡ ಮೋದಿ ಇದೇ ವಿಷಯ ಬಳಕೆ ಮಾಡಿದ್ದರು. ಚುನಾವಣಾ ಆಯೋಗದ ನಿರ್ಬಂಧದ ಬಳಿಕವೂ ವಿಂಗ್​ ಕಮಾಂಡರ್​ ಅಭಿನಂದನ್​ ಹೆಸರು ಬಳಕೆ ಮಾಡಿದ ಅವರು, ಅಂದು ಅವರು ನಮ್ಮ ಪೈಲಟ್​ ಅನ್ನು ಬಿಡುಗಡೆ ಮಾಡದಿದ್ದರೆ ಹತ್ಯಾಕಾಂಡದ ರಾತ್ರಿಯಾಗುತ್ತಿತ್ತು ಎಂದು ಆವೇಷದ ಭಾಷಣ ಮಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos