ಶ್ರೀಲಂಕಾದ ‘ಮಾನವ ಬಾಂಬ್’ಗಳು ಶ್ರೀಮಂತ ವ್ಯಾಪಾರಿಯ ಪುತ್ರರು..!?

ಶ್ರೀಲಂಕಾದ ‘ಮಾನವ ಬಾಂಬ್’ಗಳು ಶ್ರೀಮಂತ ವ್ಯಾಪಾರಿಯ ಪುತ್ರರು..!?

ಕೊಲಂಬೊ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಶ್ರೀಲಂಕಾದಲ್ಲಿ 321 ಮಂದಿ ಸಾವನ್ನಪ್ಪಿ, 500 ಮಂದಿ ಗಾಯಗೊಂಡಿರುವ ಸರಣಿ ಬಾಂಬ್ ಸ್ಫೋಟವನ್ನು ನಾವೇ ನಡೆಸಿದ್ದೇವೆ ಎಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ. ಘಟನೆ ನಡೆದ 2 ದಿನಗಳ ನಂತರ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದ್ದು, ಶ್ರೀಲಂಕಾ ಕ್ರಿಶ್ಚಿಯನ್ ಹಾಗೂ ವಿದೇಶಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ ಎಂದು ತಿಳಿಸಿದೆ. ತನ್ನ ‘ಅಮಾಕ್’ ನ್ಯೂಸ್ ಮೂಲಕ ಐಸಿಸ್ ಈ ವಿಚಾರವನ್ನು ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ ಈ ಬಗ್ಗೆ ಸಂಘಟನೆ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ. ಒಟ್ಟಿನಲ್ಲಿ ಈಗ ಇರಾಕ್, ಸಿರಿಯಾ ಬಳಿಕ ಶ್ರೀಲಂಕಾದಲ್ಲೂ ಐಸಿಸ್ ತನ್ನ ಜಾಲವನ್ನು ಹಬ್ಬಿಸಿರುವುದು ದೃಢಪಟ್ಟಿದೆ. ಇದಕ್ಕೂ ಮೊದಲು ಈಸ್ಟರ್ ಬಾಂಬ್ ದಾಳಿ ನ್ಯೂಜಿಲೆಂಡ್ ನಲ್ಲಿ ನಡೆದ ಮಸೀದಿಗಳ ಮೇಲಿನ ದಾಳಿಗೆ ಪ್ರತಿಯಾಗಿ ನಡೆಸಲಾಗಿದೆ ಎಂದು ಶ್ರೀಲಂಕಾ ಅಧಿಕಾರಿಗಳು ಶಂಕಿಸಿದ್ದರು.

ಇತ್ತ ಇಬ್ಬರು ಪಾತಕಿಗಳು ಚರ್ಚ್ ಹಾಗೂ ಹೋಟೆಲ್ ದಾಳಿ ನಡೆಸಿದ ವಿಡಿಯೋ ಲಭ್ಯವಾಗಿದ್ದು, ಕೊಲಂಬೋದ ಶ್ರೀಮಂತ ವ್ಯಾಪಾರಿಯ ಪುತ್ರರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಬ್ಬರು ಆತ್ಮಾಹುತಿ ದಾಳಿಕೋರರು ಕೂಡ ಸಹೋದರರೇ ಆಗಿದ್ದು, ಕೊಲಂಬೋದ ಮಸಾಲೆ ಮಾರಾಟ ಉದ್ಯಮಿಯ ಪುತ್ರರು ಎಂದು ವರದಿಯಾಗಿದೆ. ಘಟನೆ ಸಂಬಂಧ ಶ್ರೀಲಂಕಾ ಪೊಲೀಸ್ ತನಿಖೆ ನಡೆಸಿ ವಶಕ್ಕೆ ಪಡೆದಿರುವ 40ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿದೆ. ಅಲ್ಲದೇ ಸ್ಥಳೀಯರು ನೀಡಿದ ಮಾಹಿತಿ ಅನ್ವಯ ಸಿರಿಯಾ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಕೊಲಂಬೋದಲ್ಲಿ ನಡೆದ ದಾಳಿಯಲ್ಲಿ ಮೊದಲ 6 ದಾಳಿಗಳಲ್ಲಿ ಮೂರು ಚರ್ಚ್‍ನಲ್ಲಿ ಹಾಗೂ 3 ಹೋಟೆಲ್ ಗಳಲ್ಲಿ ನಡೆಸಲಾಗಿತ್ತು. ಕೇವಲ 20 ನಿಮಿಷಗಳ ಅವಧಿಯಲ್ಲಿ ಈ ದಾಳಿ ನಡೆಸಲಾಗಿತ್ತು. ಆ ಬಳಿಕ ಮತ್ತೆರಡು ಬಾಂಬ್ ಸ್ಫೋಟಗಳು ನಡೆದಿತ್ತು. ಘಟನೆಯಲ್ಲಿ 38 ವಿದೇಶಿಯರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಶ್ರೀಲಂಕಾ ಸರ್ಕಾರ ತಿಳಿಸಿದ್ದು, ಇದರಲ್ಲಿ ಭಾರತ ಸೇರಿದಂತೆ ಇಂಗ್ಲೆಂಡ್, ಯುಎಸ್, ಆಸ್ಟ್ರೇಲಿಯಾ, ತುರ್ಕಿಷ್, ಚೀನಾ, ಡ್ಯಾನಿಷ್, ಡಚ್ ಮತ್ತು ಪೋರ್ಚುಗಿಸ್ ಪ್ರಜೆಗಳು ಸೇರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos