ಹುಲ್ಲುಗಾವಲಾಗುತ್ತಿದೆ ಸ್ಮಾರ್ಟ್ ಸಿಟಿ ಕಾಮಗಾರಿ

ಹುಲ್ಲುಗಾವಲಾಗುತ್ತಿದೆ ಸ್ಮಾರ್ಟ್ ಸಿಟಿ ಕಾಮಗಾರಿ

ತುಮಕೂರು: ಮಹಾನಗರ ಪಾಲಿಕೆಯಾದ ನಂತರ ಅಭಿವೃದ್ಧಿ ದೃಷ್ಟಿಯಿಂದ ಒಂದು ದೊಡ್ಡ ಹಳ್ಳಿಯಂತೆ ಕಾಣುತಿತ್ತು. ಈ ಹಳ್ಳಿಗೆ ನಗರದ ಸ್ವರೂಪ ಕೊಡುವ ಸಲುವಾಗಿ ಹಾಗೂ ಮುಂದಿನ ದಿನಗಳಲ್ಲಿ ಬೆಂಗಳೂರಿನ ಉಪನಗರವಾಗಿ ನಿರ್ಮಿಸುವ ದೂರದೃಷ್ಟಿ ಇಟ್ಟುಕೊಂಡು ಸ್ಮಾರ್ಟ್ ಸಿಟಿ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.
ದೊಡ್ಡಳ್ಳಿಯ ಜನರಲ್ಲಿ ಮೂಡಿದ್ದ ಕನಸು ಈಗ ನಿಧಾನವಾಗಿ ಕರಗಲಾರಂಭಿಸಿದೆ. ಸ್ಮಾರ್ಟ್ ಸಿಟಿ ಎಂದರೆ ನಗರದ ಪ್ರಗತಿ ಹಾಗೂ ಜನರಿಗಾಗಿ ಅಲ್ಲ. ಅದು ಕೆಲವರಿಂದ, ಕೆಲವರಿಗಾಗಿ’ ಮಾತ್ರ. ಕೆಲವರಷ್ಟೇ ಉದ್ಧಾರ ಆಗುವ ಯೋಜನೆ ಎಂಬ ಭಾವನೆ ಮೂಡಲಾರಂಭಿಸಿದೆ. ನಗರದ ಯಾವ ಬಡಾವಣೆಗೆ ಕಾಲಿಟ್ಟರೂ ಗುಣಮಟ್ಟದ ಕಾಮಗಾರಿ ಕಾಣದಾಗಿದೆ.ಈ ಯೋಜನೆಗೆ ಕೋಟ್ಯಂತರ ರೂಪಾಯಿ ಹರಿದು ಬಂದಿದೆ. ಹರಿದು ಬರುತ್ತಲೇ ಇದೆ. ಕಾಮಗಾರಿ ಮಾತ್ರ ಮುಂದೆ ಸಾಗುತ್ತಿಲ್ಲ. ಗುಣಮಟ್ಟ ಖಾತರಿಪಡಿಸುವ ಯಾವ ಕುರುಹುಗಳೂ ಗೋಚರಿಸುತ್ತಿಲ್ಲ. ಇಂತಹ ಅವ್ಯವಸ್ಥೆ ನೋಡಿದ ಜನರಿಗೆ ಯೋಜನೆ, ಆಡಳಿತ ವ್ಯವಸ್ಥೆ ಬಗ್ಗೆ ತೀವ್ರ ಭ್ರಮನಿರಸನಗೊಂಡಿದ್ದಾರೆ. ಸ್ಮಾರ್ಟ್ ಸಿಟಿ ಜಾರಿಯಾಗುತ್ತಿರುವ ಬಗ್ಗೆ ಜನರ ಭಾವನೆಗಳು ಅಸಹನೆ ಮೂಡಿಸುತ್ತಿದೆ.
ಕಾಮಗಾರಿಗಳ ಸ್ಥಿತಿ ಗಮನಿಸಿದರೆ ಎಂತಹವರಿಗೂ ಸಿಟ್ಟು ಬರುತ್ತದೆ, ಆಕ್ರೋಶ ವ್ಯಕ್ತವಾಗುತ್ತದೆ. ರಸ್ತೆಗೆ ಡಾಂಬರು ಹಾಕಿದ ನಂತರ ಪೈಪ್ ಲೈನ್ ಕಾಮಗಾರಿಗೆ ರಸ್ತೆ ಅಗೆಯಲಾಗುತ್ತಿದೆ. ಮತ್ತೆ ಕಾಮಗಾರಿ ಮಾಡಿ ರಸ್ತೆ ಸರಿಪಡಿಸಿದ ನಂತರ ವಿದ್ಯುತ್ ಕಂಬ ನೆಡಲು ಗುಂಡಿ ತೋಡಲಾಗುತ್ತಿದೆ. ಆ ಗುಂಡಿ ಮುಚ್ಚಿಸಿದರೆ ಮತ್ತೊಮ್ಮೆ ದೂರವಾಣಿ ಕೇಬಲ್‌ನವರು, ಇನ್ನೊಮ್ಮೆ ನೀರು ಸೋರಿಕೆ ಸರಿಪಡಿಸಲು ಅಗೆಯುವ ಸಾಮಾನ್ಯ ದೃಶ್ಯ ನಗರದಲ್ಲಿ ಕಂಡುಬರುತ್ತದೆ. ಮನೆ ಕಟ್ಟುವುದು, ಬೀಳಿಸುವುದು, ಮತ್ತೆ ಕಟ್ಟುವುದು, ಒಂದು ರೀತಿ ಮಕ್ಕಳ ಆಟದಂತೆ ಕಂಡುಬರುತ್ತಿದೆ. ಸಮನ್ವಯದಿಂದ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ಇದ್ದರೂ ಯಾವ ಇಲಾಖೆ ನಡುವೆಯೂ ಸಮನ್ವಯತೆ ಕಾಣುತ್ತಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos