ರೌಡಿಗಳಿಗೆ ಸಿಂಗಂ ಖಡಕ್ ವಾರ್ನಿಂಗ್

ರೌಡಿಗಳಿಗೆ ಸಿಂಗಂ ಖಡಕ್ ವಾರ್ನಿಂಗ್

ಬೆಂಗಳೂರು, ಆ. 17: ದಂಧೆ ಕೋರರು, ಕಿಡಿಗೇಡಿಗಳ ಆಟಾಟೋಪ ಬಂದ್ ಆಗಬೇಕು. ರೌಡಿಗಳು ಬಾಲ ಬಿಚ್ಚಿದರೆ ಕಟ್ ಮಾಡಲಾಗುತ್ತದೆ. ಗಾಂಜಾ ಸಪ್ಲೈಯರ್ಸ್ಗೆ ಉಳಿಗಾಲ ಇನ್ನಿಲ್ಲ… ಹೀಗೆ ಖಡಕ್ ವಾರ್ನಿಗ್ ನೀಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್, ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ದಿಟ್ಟಹೆಜ್ಜೆ ಇಟ್ಟಿರುವುದಾಗಿ ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಯಾಗಿ, ಸಾರ್ವಜನಿಕ ವಲಯದಲ್ಲಿ ಸಿಂಗಂ ಎಂದೇ ಖ್ಯಾತರಾಗಿರುವ ರವಿ ಡಿ ಚನ್ನಣ್ಣನವರ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿಯಾಗಿ ಕೆಲದಿನಗಳ ಹಿಂದಷ್ಟೇ ಅಧಿಕಾರವಹಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ನೆಲೆನಿಂತಿರುವ ದಂಧೆಕೋರರು, ಕಿಡಿಗೇಡಿಗಳು ತಮ್ಮ ಕುಕೃತ್ಯಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಿರ್ಧಾಕ್ಷಿಣ್ಯ ಕ್ರಮವಹಿಸಲಾಗುವುದು ಎಂದು ಖಡಕ್. ವಾರ್ನಿಂಗ್ ನೀಡಿರುವ ಅವರು, ಆನೇಕಲ್ ತಾಲೂಕಿನಲ್ಲಿ ಗಾಂಜಾ ಸಪ್ಲೈಯರ್ಸ್ಗೆ ಇನ್ನು ಉಳಿಗಾವಿಲ್ಲ. ಕಟ್ಟಿಗೆನಹಳ್ಳಿಯಲ್ಲಿ ನಡೆಯುತ್ತಿರುವ ರಕ್ತಚಂದನ ಸರಬರಾಜು ಬಂದ್ ಆಗಲೇಬೇಕು. ರೌಡಿಗಳು ಬಾಲ ಬಿಚ್ಚಿದರೆ ಕಟ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪೊಲೀಸ್ ಠಾಣೆಗಳಲ್ಲಿ ಇನ್ಮುಂದೆ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಜಾಗ ಇಲ್ಲ. ಗ್ರಾಮಾಂತರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿ ಹೋಗಲೇಬೇಕು. ಠಾಣೆಯಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ಸಿಗದಿದ್ದರೆ ನನ್ನನ್ನು ಖುದ್ದು ಸಂಪರ್ಕಿಸಬಹುದು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಆನೆಕಲ್ಲ್ ತಾಲೂಕಿನಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಐದಕ್ಕಿಂತ ಹೆಚ್ಚು ಪ್ರಕರಣಗಳಿರುವ ರೌಡಿಗಳನ್ನು ಗಡಿಪಾರು ಮಾಡುವ ಮೂಲಕ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು  ಎಂದು ಎಚ್ಚರಿಕೆ ನೀಡಿದರು.

ಪೊಲೀಸ್ ಠಾಣೆ ಇರುವುದು ನೊಂದ ಜನರಿಗೆ ನ್ಯಾಯ ಒದಗಿಸುವುದಕ್ಕೆ. ಮನುಷ್ಯನಿಗೆ ತಕ್ಕ ಮಾತು ರೋಗಕ್ಕೆ ತಕ್ಕ ಮದ್ದು. ಬಾಯಿ ಮಾತಲ್ಲಿ ಕೇಳಿದರೆ ಹೇಳ್ತಿವಿ, ಇಲ್ಲ ಅಂದ್ರೆ ನಮಗೂ ಸಾಕಷ್ಟು ಅವಕಾಶಗಳಿವೆ. ಸಮಸ್ಯೆಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos