ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ: ಸಿದ್ದು ಖಡಕ್ ವಾರ್ನಿಂಗ್

ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ: ಸಿದ್ದು ಖಡಕ್ ವಾರ್ನಿಂಗ್

ಮೈಸೂರು: ಲೋಕಸಭಾ ಚುನಾವಣೆ ರಾಜ್ಯದಲ್ಲೇ ಬಿಸಿ ಹೆಚ್ಚಾಗಿದ್ದು ಅಭ್ಯರ್ಥಿಗಳ ಪರ ಮತಯಾಚಿಸಲು  ಪಕ್ಷದ ನಾಯಕರು ಮುಂದಾಗಿದ್ದಾರೆ. ನಾನು ಮುಖ್ಯಮಂತ್ರಿ ಆಗಿರುವುದಕ್ಕೆ, ಮೋದಿ ಪ್ರಧಾನಮಂತ್ರಿ ಆಗಿರುವುದಕ್ಕೆ ನಮ್ಮ ಸಂವಿಧಾನ ಕಾರಣ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರತಿಪಾದಿಸಿದರು.

ನಿನ್ನೆ ಮೈಸೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ನಮ್ಮ ಈ ಸಂವಿಧಾನ ಬದಲಾವಣೆಯ ಅಜೆಂಡಾ ಇಟ್ಟುಕೊಂಡಿದೆ. ಈ ಸಂವಿಧಾನ ಬದಲಾದರೆ ದೇಶದ ದಲಿತರು, ಶೂದ್ರರು, ಮಹಿಳೆಯರು ಮತ್ತು ಶ್ರಮಿಕ ವರ್ಗಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ನಾವೆಲ್ಲಾ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನ ಉಳಿಯಬೇಕು ಎಂದರೆ ಬಿಜೆಪಿ ಸೋಲಬೇಕು ಎನ್ನುವ ಪಣ ತೊಡಿ ಎಂದರು.

ನಮ್ಮ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ. ನಮ್ಮ ಸಂವಿಧಾನದ ಸ್ವರೂಪ ಬದಲಾಯಿಸಿ ದೇಶದ ದುಡಿಯುವ ವರ್ಗಗಳಿಗೆ ವಂಚಿಸಿದರೆ ದೇಶದ ಪರಿಸ್ಥಿತಿ ಬಿಗಡಾಯಿಸುತ್ತದೆ. ಬಿಜೆಪಿಯವರಿಗೆ ಎಚ್ಚರಿಕೆ ಕೊಡುತ್ತೇನೆ. ಸಂವಿಧಾನ ಮುಟ್ಟಿದ್ರೆ ನೀವು ನಾಶವಾಗ್ತೀರಾ ಎಂದು ಸಿಎಂ ಸಿದ್ದರಾಮಯ್ಯ ನೇರಾನೇರ ಎಚ್ಚರಿಕೆ ಕೊಟ್ಟರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚು ಮಂದಿ ಹೋಬಳಿ ಮಟ್ಟದ ಮುಖಂಡರುಗಳನ್ನು ಹಾಗೂ ಮಾಜಿ ಕೇಂದ್ರ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಆತ್ಮೀಯರು ಮತ್ತು ಸಂಬಂಧಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್  ಅವರು ನಾನು ಹಿಂದುವಾಗಿ ಸಾಯುವುದಿಲ್ಲ ಎಂದು ಹೇಳಿ ಬೌದ್ದ ಧರ್ಮಕ್ಕೆ ಹೋಗಿದ್ದಕ್ಕೆ ಮುಖ್ಯ ಕಾರಣ ಜಾತಿ ಅಸಮಾನತೆ, ಮತ್ತು ಸಾಮಾಜಿಕ ಅಸಮಾನತೆಯೇ ಕಾರಣ ಎಂದರು.

ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕಡಿಮೆ ಇದೆ. ನಾವು ಅಧಿಕಾರಕ್ಕೆ ಬಂದರೆ ನಾವು ರಾಜ್ಯದಲ್ಲಿ ತಂದಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ಪರವಾದ ಕಾನೂನುಗಳನ್ನು ರಾಷ್ಟ್ರಮಟ್ಟದಲ್ಲೂ ಜಾರಿಗೆ ತರಲಾಗುವುದು. ಈ ಬಗ್ಗೆ ರಾಹುಲ್ ಗಾಂಧಿ ಅವರ ಜತೆಗೂ ಮಾತಾಡಿ ಪ್ರಣಾಳಿಕೆಯಲ್ಲಿ ಸೇರಿಸಲು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos