ಟ್ರಬಲ್ ಶೂಟರ್ ಸ್ವಾಗತಕ್ಕಿಲ್ಲ ಸಿದ್ದರಾಮಯ್ಯ

ಟ್ರಬಲ್ ಶೂಟರ್ ಸ್ವಾಗತಕ್ಕಿಲ್ಲ ಸಿದ್ದರಾಮಯ್ಯ

ಬೆಂಗಳೂರು, ಅ. 26: ತಿಹಾರ್ ಜೈಲು ವಾಸದಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿ 2 ತಿಂಗಳ ಬಳಿಕ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್.

ಬರುವಿಕೆಯನ್ನು ಶಕ್ತಿ ಪ್ರದರ್ಶನಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ದಿಲ್ಲದೆ ಗದಗಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಡಿಕೆಶಿ ದಿನಚರಿ

ಡಿ.ಕೆ.ಶಿವಕುಮಾರ್ ಬೆಳಗ್ಗೆ 11.50ಕ್ಕೆ ವಿಮಾನದಲ್ಲಿ ಹೊರಡಲಿದ್ದು, ಮದ್ಯಾಹ್ನ 2.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ.

ಬೆಂಗಳೂರಿನ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿ ತನಕ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಡಿಕೆಶಿ ಕರೆತರಲು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆ.

ಜಾಲಹಳ್ಳಿ, ಕೊಡಗೆನಹಳ್ಳಿ, ಹೆಬ್ಬಾಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿಯನ್ನು ಸ್ವಾಗತಿಸಲಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ದಿನೇಶ್ ಗುಂಡೂರಾವ್ ಮತ್ತು ಈಶ್ವರ್ ಖಂಡ್ರೆ ಸ್ವಾಗತಿಸಲಿದ್ದಾರೆ.

ಸಂಜೆ 5.30ಕ್ಕೆ ಡಿಕೆಶಿಯವರ ಪತ್ರಿಕಾಗೋಷ್ಠಿ ನಡೆಸಿದ ನಂತರ ಸದಾಶಿವ ನಗರದ ಮನೆಗೆ ತೆರಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಪ್ರವಾಸ: ಡಿಕೆಶಿ ಅವರನ್ನು ಸ್ವಾಗತಿಸುವ ಸಂಭ್ರಮದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರ ಉಳಿದಿದ್ದಾರೆ. ಗದಗ ಪ್ರವಾಸವನ್ನು ಕೈಗೊಂಡು ರಾಜಧಾನಿಯಿಂದಲೂ ಹೊರಗಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮ ಎಂದು ಸಮಜಾಯಿಷಿ ಕೊಟ್ಟಿರುವ ಸಿದ್ದರಾಮಯ್ಯ, ಸ್ವಾಗತ ಕಾರ್ಯಕ್ರಮ, ಮೆರವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಗುಂಡೂರಾವ್ ಮತ್ತು ಸಿದ್ದರಾಮಯ್ಯ ಸಭೆ: ಡಿಕೆಶಿ ಆಗಮನಕ್ಕೆ ಪೂರ್ವಭಾವಿಯಾಗಿ ಡಿಕೆಶಿ ಬೆಂಬಲಿಗರು ಮತ್ತು ಕಾರ್ಯಕರ್ತರ ನಾಡಿ ಮಿಡಿತ ಅರಿತ ದಿನೇಶ್ ಗುಂಡೂರಾವ್ ಸ್ವಾಗತಿಸುವ ವಿಚಾರಕ್ಕೆ ಸಲಹೆ ಪಡೆಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು.

ಈ ವೇಳೆ ಸಿದ್ದರಾಮಯ್ಯ, ನೋಡಪ್ಪ ಡಿಕೆಶಿ ಒಳಗೆ ಹಾಕಿದ್ದು ರಾಜಕೀಯ ಕಾರಣಕ್ಕೆ ಅಂತ ಎಲ್ಲರಿಗೂ ಗೊತ್ತಿರುವ ಸತ್ಯ.. ಆದ್ರೆ ಬಿಜೆಪಿ ಯವರನ್ನ ಟೀಕೆ ಮಾಡ್ತೀವಿ, ನಾವೇ ಹೋಗಿ ಬರ ಮಾಡಿಕೊಂಡರೆ ತಪ್ಪು ಸಂದೇಶ ರವಾನೆಯಾಗುತ್ತೆ ಅಂತ ಹೇಳಿ ಕಳಿಸಿರುವುದಾಗಿ ತಿಳಿದು ಬಂದಿದೆ.

 

ಜನಾರ್ಧನ ರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿ ಬಿಜೆಪಿ ನಾಯಕರನ್ನು ಜೈಲಿಗೆ ಹೋಗಿ ಬಂದವರು ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಈಗಲೂ ಟೀಕಿಸುತ್ತಿರುತ್ತಾರೆ.

ಡಿಕೆಶಿಯನ್ನು ಸ್ವಾಗತಿಸಿದರೆ ಬಿಜೆಪಿಯವರ ರಾಜಕೀಯಕ್ಕೆ ಅದುವೇ ಅಸ್ತ್ರವಾದೀತೆಂಬ ಭಯವೂ ಸಿದ್ದರಾಮಯ್ಯಗೆ ಕಾಡುತ್ತಿರಬಹುದು. ಹೀಗಾಗಿಯೇ ದೂರ ಉಳಿದಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಡಿಕೆಶಿಯನ್ನು ವಿಮಾನ ನಿಲ್ದಾಣಕ್ಕೆ ಹೋಗಿ ಬರಮಾಡಿಕೊಳ್ಳುವುದು ಸರಿಯಲ್ಲ. ಕೆಪಿಸಿಸಿ ಯಲ್ಲಿ ಸ್ವಾಗತ ಮಾಡಿ..ಅದಕ್ಕೂ ಜಾಸ್ತಿ ಮಾಡಿದ್ರೆ ಸಂಘಟನೆ ದೃಷ್ಟಿಯಿಂದ ಪಕ್ಷಕ್ಕೆ ನಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆಂಬುದು ಎಂಬುದು ಬಹಿರಂಗವಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos