ಬಿಜೆಪಿಯಲ್ಲಿ ಹಣ ಬಲ ಇದ್ದರೆ ನಮ್ಮಲ್ಲಿ ಜನಬಲ ಇದೆ: ಸಿಎಂ ಸಿದ್ದರಾಮಯ್ಯ

ಬಿಜೆಪಿಯಲ್ಲಿ ಹಣ ಬಲ ಇದ್ದರೆ ನಮ್ಮಲ್ಲಿ ಜನಬಲ ಇದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುಣಾವಣೆ ಬಿಸಿ ಹೆಚ್ಚಿದು. ರಾಜ್ಯದಲ್ಲಿ ಬಿಜೆಪಿ- ಜೆಡಿಸ್‌ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಭಾರತೀಯ ಜನತಾ ಪಕ್ಷ ಸ್ವಾಯತ್ತ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೊದಲಾದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯಲು ಹೊರಟಿದೆ. ಈ ಹುನ್ನಾರದ ಭಾಗವಾಗಿಯೇ ನಮ್ಮ ಪಕ್ಷದ ವಿರುದ್ದ ‘’ತೆರಿಗೆ ಭಯೋತ್ಪಾದನೆ’ಯಲ್ಲಿ ತೊಡಗಿದೆ. ಈ ರೀತಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಆ ಪಕ್ಷದ ಭ್ರಮೆ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.

₹1,823 ಕೋಟಿ ತೆರಿಗೆ ಕಟ್ಟುವಂತೆ ಕಾಂಗ್ರೆಸ್​ಗೆ IT ನೋಟಿಸ್ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ತೆರಿಗೆ ಭಯೋತ್ಪಾದನೆ ಯಿಂದ ಕಾಂಗ್ರೆಸ್ ಪಕ್ಷವನ್ನು ಮಣಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಭ್ರಮೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಮೊದಲಾದ ಬ್ಯಾಂಕ್ ವಂಚಕರ 10.09 ಲಕ್ಷ ಕೋಟಿ ರೂಪಾಯಿಯಷ್ಟು ಬ್ಯಾಂಕ್ ಸಾಲವನ್ನು‌ ಮನ್ನಾ ಮಾಡಿರುವ ಬಿಜೆಪಿ ಸರ್ಕಾರ ಅವರಿಂದ ಪಡೆದಿರುವ ಕಮಿಷನ್ ಹಣ ಎಷ್ಟು ಎನ್ನುವುದನ್ನು ದೇಶದ ಜನತೆಗೆ ತಿಳಿಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದ ನಿಜವಾದ ಶಕ್ತಿ ಹಣದ ಬಲ ಅಲ್ಲ, ಜನ ಬಲ. ಬಿಜೆಪಿಯಲ್ಲಿ ಹಣ ಬಲ ಇದ್ದರೆ ನಮ್ಮಲ್ಲಿ ಜನಬಲ ಇದೆ. ತೆರಿಗೆ ವಂಚಕರು, ಬ್ಯಾಂಕ್ ಗಳನ್ನು ಮುಳುಗಿಸಿದವರು, ಗಣಿ ಲೂಟಿಕೋರರು, ಕಾಳಸಂತೆಕೋರರು, ಕಳ್ಳ-ಖದೀಮರೇ ಬಿಜೆಪಿಯ ಬಲ.

ಬಿಜೆಪಿ ಅಂದ್ರೆ ಭ್ರಷ್ಟರ ಹಣವನ್ನು ನುಂಗಿ ಅವರಿಗೆ ಪ್ರಾಮಾಣಿಕತೆಯ ಸರ್ಟಿಫಿಕೇಟ್ ನೀಡುವ ವಾಷಿಂಗ್‌ ಮೆಶಿನ್‌ ಆಗಿದೆ. ಭ್ರಷ್ಟರು ತಾವು ಮಾಡಿದ ಮಹಾಪಾಪಗಳ ಮೇಲಿನ ತನಿಖೆಯಿಂದ ತಪ್ಪಿಸಿಕೊಳ್ಳಬೇಕಾದರೆ, ಶಿಕ್ಷೆಯಿಂದ ಪಾರಾಗಬೇಕಾದರೆ ಬಿಜೆಪಿ ಸೇರಿಕೊಂಡರೆ ಸಾಕು, ಪಾಪಗಳೆಲ್ಲವೂ ತನ್ನಿಂತಾನೆ ಶುದ್ಧವಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಮತ್ತು ಅಧಿಕಾರವನ್ನು ಉಳಿಸಿಕೊಂಡಿದ್ದೇ ಇಂತಹ ಕಳ್ಳ-ಖದೀಮರ ಲೂಟಿಯ ಹಣದಿಂದ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕದಲ್ಲಿ ನಡೆಸುತ್ತಾ ಬಂದ ಆಪರೇಷನ್ ಕಮಲ.

400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಎದೆ ತಟ್ಟಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರಮೋದಿಯವರು ವಿರೋಧಪಕ್ಷಗಳನ್ನು ಹಣಿಯಲು ಈ ರೀತಿಯ ಅಕ್ರಮ ಕೃತ್ಯಗಳಿಗೆ ಇಳಿದಿರುವುದನ್ನು ನೋಡಿದರೆ ಅವರಿಗೆ ಗೋಡೆ ಮೇಲಿನ ಬರಹ ಸ್ಪಷ್ಟವಾಗಿ ಕಾಣತೊಡಗಿದೆ ಎಂದರ್ಥ. ಅರಸನ ಮೈಮೇಲಿನ ಬಟ್ಟೆ ಒಂದೊಂದಾಗಿ ಕಳಚಿ ಬೀಳುತ್ತಿದೆ. ದೇಶದ ಜಾಗೃತ ಮತದಾರರ ಮುಂದೆ ಬಿಜೆಪಿ ಮತ್ತು ಅದರ ತಥಾಕಥಿತ ನಾಯಕರೆಲ್ಲರೂ ಬತ್ತಲೆಯಾಗುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos