ಶುದ್ಧ ನೀರನ್ನೇ ಕೆರೆಗಳಿಗೆ ಹರಿಸಿ: ಆಂಜನೇಯರೆಡ್ಡಿ ಒತ್ತಾಯ

ಶುದ್ಧ ನೀರನ್ನೇ ಕೆರೆಗಳಿಗೆ ಹರಿಸಿ: ಆಂಜನೇಯರೆಡ್ಡಿ ಒತ್ತಾಯ

ಬೆಂಗಳುರು, ಜೂ. 24:  ಬೆಂಗಳೂರಿನ ಕೊಳಚೆ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ತುಂಬಿಸಿ ಕೆ.ಸಿ.ವ್ಯಾಲಿ ಯೋಜನೆ ರೂಪಿಸುವಲ್ಲಿ  ಹಾಗೂ ಜಾರಿಗೊಳಿಸುವಲ್ಲಿ ಪಾರದರ್ಶಕತೆ ಪಾಲಿಸದೆ ರೈತರನ್ನು ವಂಚಿಸಲಾಗಿದೆ. ಇದೇ ರೀತಿಯೆ ಈಗ ನೆಲಮಂಗಲ, ದೊಡ್ಡಬಳ್ಳಾಪುರ ತಾಲ್ಲೂಕಿನ ಕೆರೆಗಳಿಗೆ ಕೊಳಚೆ ನೀರು ತರುವ ಯೋಜನೆಯು ಆಗದಂತೆ ಈಗಿನಿಂದಲೇ ರೈತರು ಹಾಗೂ ಪರಿಸರಾಸಕ್ತರು ಎಚ್ಚರವಹಿಸಬೇಕಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜಿನೇಯರೆಡ್ಡಿ ಹೇಳಿದರು.
ಅವರು ನಗರದ ಮಹಿಳಾ ಸಮಾಜದಲ್ಲಿ ಪರಿಸರ ಸಮ್ಮೇಳನ ಸಮಿತಿ ವತಿಯಿಂದ ನಡೆದ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.
ಯಾವುದೇ ನೀರಾವರಿ ಯೋಜನೆ ಪ್ರಾರಂಭಿಸುವ ಮುನ್ನ ಯೋಜನೆಯ ಸಾಧಕ-ಬಾಧಕಗಳ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದಿಟ್ಟು ಸಮಾಲೋಚನ ಸಭೆಗಳನ್ನು ನಡೆಸಬೇಕು. ಆದರೆ ಇಂತಹ ಯಾವುದೇ ಸಭೆಗಳನ್ನು ನಡೆಸದಲೆಯೇ ಕೆ.ಸಿ.ವ್ಯಾಲಿ ಯೋಜನೆಯನ್ನು ತರಾತುರಿಲ್ಲಿ ಜಾರಿಗೊಳಿಸಲು ಹೋಗಿ ಶುದ್ದೀಕರಿಸಿದ ನೀರಿಗೆ ಬದಲಾಗಿ ಕೊಳಚೆ ನೀರು ಕೆರೆಗಳಿಗೆ ಬರುವಂತಾಗಿದೆ. ಯೋಜನೆಯನ್ನು ಸಮಪರ್ಕವಾಗಿ ಜಾರಿಗೊಳಿಸುವಲ್ಲಿ ರಾಜಕೀಯ ಮುಖಂಡರು ನೀಡುವ ಭರವಸೆಗಳ ಮೇಲೆ ನಾವು ನಂಬಿಕೆ ಕಳೆದುಕೊಂಡಿದ್ದೇವೆ. ಹೀಗಾಗಿಯೇ ಸೂಕ್ತ ದಾಖಲೆಗಳ ಆಧಾರದ ಮೇಲೆ ರಾಜ್ಯ ಹೈಕೋರ್ಟ್‌ ಮೊರೆ ಹೋಗಿದ್ದೇವೆ. ನ್ಯಾಯಾಲಯ ರೈತರಪರವಾಗಿ ತೀರ್ಪು ನೀಡಿ ಯೋಜನೆ ಜಾರಿಗೊಳಿಸುವಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಲಿದೆ ಎನ್ನುವ ವಿಶ್ವಾಸ ಇದೆ ಎಂದರು.
ಈ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ನೀರಿನ ಭವಣೆ ನೀಗಲು ಪರಮಶಿವಯ್ಯ ಅವರು ರೂಪಿಸಿರುವ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬರಬೇಕು ಎನ್ನುವುದು ನಮ್ಮ ಒತ್ತಾಯ. ಇದರ ಜೊತೆಗೆ ಬೇರೆ ಯೋಜನೆಗಳ ಮೂಲಕ ನಮ್ಮ ಬಯಲು ಸೀಮೆಯ ಕೆರೆಗಳಿಗೆ ನೀರು ತರುತ್ತೇವೆ ಎನ್ನುವುದಕ್ಕು ನಮ್ಮದು ಸ್ವಾಗತ ಇದೆ. ಆದರೆ ಕಾನೂನು ಮೀರಿ ಕೊಳಚೆ ನೀರನ್ನು ತಂದು ಇಲ್ಲಿನ ಕೆರೆಗಳಿಗೆ ತುಂಬಿಸಿ ರೈತರ ಭೂಮಿ, ಆರೋಗ್ಯ ಹಾಳಾಗಲು ಮಾತ್ರ ಅವಕಾಶ ನೀಡೆವುದಿಲ್ಲ ಎಂದು ಎಚ್ಚರಿಸಿಕೆ ನೀಡಿದರು.
ಈ ಭಾಗದ ಜನರನ್ನು ನೀರಾವರಿ ವಿಚಾರದಲ್ಲಿ ಭ್ರಮಾಲೋಕದಲ್ಲಿರಿಸಿ ಯೋಜನೆಗಳ ಅನುಷ್ಠಾನಕ್ಕೆ ರಾಜಕೀಯ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಹ ಅಧ್ಯಯನ ನಡೆಸಿ ಕೆ.ಸಿ.ವ್ಯಾಲಿ ಮೂಲಕ ಹರಿಸಲಾಗುತ್ತಿರುವ ಕೊಳಚೆ ನೀರನ್ನು ಮೂರು ಹಂತಗಳಲ್ಲಿ ಶುದ್ದೀಕರಿಸಿ ಹರಿಸಬೇಕು ಎಂದು ವರದಿ ನೀಡಿದ್ದಾರೆ. ಆದರೆ ಸರ್ಕಾರ ವಿಜ್ಞಾನಿಗಳ ವರದಿಯನ್ನೇ ಗಾಳಿಗೆ ತೂರಿದೆ. ಬೆಂಗಳೂರಿನ ಕೊಳಚೆ ನೀರನ್ನು ಮೂರು ಹಂತಗಳಲ್ಲಿ ಶುದ್ದೀಕರಿಸಿ ಈ ಭಾಗದ ಕೆರೆಗಳಿಗೆ ಹರಿಸದೇ ಇದ್ದರೆ ಕೆಲವೆ ವರ್ಷಗಳಲ್ಲಿ ಇಲ್ಲಿನ ಜೀವವೈದ್ಯವೇ ನಾಶವಾಗಲಿದೆ ಎಂದು ಎಚ್ಚರಿಸಿದರು.
ಬೆಂಗಳೂರಿನ ಕೊಳಚೆ ನೀರಿನಿಂದ ತಮಿಳುನಾಡಿನಲ್ಲಿ ಕೃಷಿ ಭೂಮಿ ಹಾಳಾಗಿದ್ದರಿಂದಲೇ ಅಲ್ಲಿನ ಸರ್ಕಾರ ನಿಮ್ಮ ಕೊಳಚೆ ನೀರನ್ನು ನಮ್ಮ ಕಡೆಗೆ ಬಿಡಬೇಡಿ. ಇಲ್ಲಿಯವರೆಗೆ ಕೊಳಚೆ ನೀರಿನಿಂದಾಗಿ ರೈತರಿಗೆ ಆಗಿರುವ ನಷ್ಟದ ಭಾಗವಾಗಿ 10 ಸಾವಿರ ಕೋಟಿ ರೂಪಾಯಿ ದಂಡ ಕಟ್ಟಿಕೊಡಿ ಎಂದು ಕೇಳಿತು. ಇದರಿಂದ ಎಚ್ಚೆತ್ತ ಸರ್ಕಾರ 2015ರಲ್ಲಿ ತರಾತುರಿಯಲ್ಲಿ ಕೆ.ಸಿ.ವ್ಯಾಲಿ ಯೋಜನೆ ರೂಪಿಸಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.ದೊಡ್ಡಬಳ್ಳಾಪುರ, ನೆಲಮಂಗಲದ ಸಾರ್ವಜನಿಕರು ಈಗಿನಿಂದಲೇ ಎಚ್ಚರವಹಿಸಿ ಬೆಂಗಳೂರಿನಿಂದ ಬರುವ ಕೊಳಚೆ ನೀರು ಮೂರು ಹಂತಗಳಲ್ಲಿ ಶುದ್ದೀಕರಣವಾಗುವಂತೆ, ಈ ನಿಯಮ ಉಲ್ಲಂಘನೆ ಮಾಡುವ ಎಂಜಿನಿಯರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾನೂನು ರೂಪಿತವಾಗಬೇಕು ಎಂದರು ಆಗ್ರಹಿಸಿದರು.
ಸಿಪಿಎಂ ಮುಖಂಡ ಆರ್‌.ಚಂದ್ರತೇಜಸ್ವಿ ಮಾತನಾಡಿ, ಕೋಲಾರಕ್ಕೆ ನೀರು ತರಲು ವಹಿಸಿದಷ್ಟು ಕಾಳಜಿಯನ್ನು ಶಾಸಕ ರಮೇಶ್‌ಕುಮಾರ್‌, ಕೊಳಚೆ ನೀರು 3 ಹಂತಗಳಲ್ಲಿ ಶುದ್ದೀಕರಣಗೊಂಡ ನಂತರವೇ ಕೆರೆಗಳಿಗೆ ಹರಿಸಬೇಕು ಎನ್ನುವ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಇಲ್ಲಿನ ಎಲ್ಲಾ ರೀತಿಯ ಅಭಿವೃದ್ದಿಗೂ ಸಿಂಗಾಪುರವನ್ನು ಮಾದರಿಯಾಗಿ ಉದಾಹರಣೆ ನೀಡುವ ಅಧಿಕಾರಿಗಳು, ರಾಜಕೀಯ ಮುಖಂಡರು ಸಿಂಗಾಪುರದಲ್ಲಿನ ಕೊಳಚೆ ನೀರನ್ನು 3 ರಿಂದ 4 ಬಾರಿ ಶುದ್ಧೀಕರಿಸಿ ಕುಡಿಯಲು ಬಳಸಲಾಗುತ್ತಿದೆ. ಆದರೆ ಇಲ್ಲಿನ ಕೊಳಚೆ ನೀರನ್ನು ಕೆರೆಗಳಿಗೆ ತುಂಬಿಸುಷ್ಟು ಸಹ ಶುದ್ದೀಕರಿಸದೇ ಇದ್ದರೆ ಹೇಗೆ ತಾನೆ ಭೂಮಿ ಉಳಿಯಲು ಸಾಧ್ಯ ಎಂದು ಪ್ರಶ್ನಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷೆ ಕೆ.ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿ, ಇಲ್ಲಿನ ಬಡ ರೈತರು ಉಳಿಯಬೇಕಾದರೆ ಯಾವ ಯೋಜನೆ ಹಾಗೂ ಎಲ್ಲಿಂದಲಾದರೂ ನೀರು ತನ್ನಿ. ಆದರೆ ಶುದ್ದೀಕರಣ ಕಡ್ಡಾಯವಾಗಿ ಆಗಬೇಕು ಎನ್ನುವ ಆಗ್ರಹ ನಮ್ಮದಾಗಿದೆ ಎಂದರು.
ಸಭೆಯಲ್ಲಿ ಸಂವಾದ ಸಂಸ್ಥೆ ಜನಾರ್ಧನ ಕೆಸರಗದ್ದೆ, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್‌ನಾಯ್ಕ್‌, ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್‌.ಪ್ರಭಾ, ಖಜಾಂಚಿ ಯಶೋಧ, ನಿರ್ದೇಶಕಿ ವರಲಕ್ಷ್ಮೀ, ಅಭಿವೃದ್ದಿ ಸಮಿತಿಯ ವೆಂಕಟರಾಜು, ಪರಿಸರ ಸಿರಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ,ರಾಜಶೇಖರ್‌,ರೋಹಿತ್‌,ಯುವ ಸಂಚಲನ ಅಧ್ಯಕ್ಷ ಚಿದಾನಂದ್‌, ಮಂಜುನಾಥ್‌, ಭರತ್‌ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos