ಶ್ರೀಗಳ ಕ್ರಿಯಾ ಸಮಾಧಿ ವಿಧಿವಿಧಾನ ಹೇಗೆ ನಡೆಯುತ್ತೆ..?

ಶ್ರೀಗಳ ಕ್ರಿಯಾ ಸಮಾಧಿ ವಿಧಿವಿಧಾನ ಹೇಗೆ ನಡೆಯುತ್ತೆ..?

ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಸಮಾಧಿಯ ವಿಧಿ ವಿಧಾನಗಳು ವೀರಶೈವ ಲಿಂಗಾಯಿತ ಆಗಮೋಕ್ತ ರೀತಿಯಲ್ಲಿ ನಡೆಯಲಿವೆ.

ಪಾರ್ಥಿವ ಶರೀರಕ್ಕೆ ಅಂತಿಮಪುಣ್ಯ ಸ್ನಾನ ಮಾಡಿಸಲಾಗುತ್ತದೆ. ನಾಡಿನ ಪುಣ್ಯ ನದಿಗಳಿಂದ ತರಿಸಿರುವ ಪವಿತ್ರ ತೀರ್ಥಗಳಿಂದ ಅಭಿಷೇಕ ನೆರವೇರಿಸಿ ಹೊಸ ಕಷಾಯ ವಸ್ತ್ರಗಳನ್ನು ಧಾರಣೆ ಮಾಡಿಸಲಾಗುತ್ತದೆ.

ನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರಿಗೆ ಪಟ್ಟಾಧಿಕಾರ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಲಾಗುತ್ತದೆ. 

ಈ ವೇಳೆ ಶ್ರೀಗಳ ಕೈಯಲ್ಲಿ ಇಷ್ಟ ಲಿಂಗವನ್ನು ಇರಿಸಲಾಗುತ್ತದೆ. ನಂತರ ರುದ್ರಾಕ್ಷ ಮಂತ್ರ ಪಠಣ ಮಾಡುತ್ತಾ ಶ್ರೀಗಳ ಪಾರ್ಥಿವ ಶರೀರಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಗುತ್ತದೆ. ಬಳಿಕ ಮಹಾ ಮಂಗಳಾರತಿ ಮಾಡಲಾಗುತ್ತದೆ. ಗದ್ದುಗೆಯ ಒಳಗೆ ತಂಬಿಟ್ಟು, ಚಿಗಲಿ ಹಾಗೂ ಹಸಿ ಕಡಲೆಕಾಳು ನೈವೇದ್ಯ ನೆರವೇರಿಸಲಾಗುತ್ತದೆ. ಕೆಳ ಭಾಗದಲ್ಲಿ ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿಗಳಿಂದ ಪಾರ್ಥಿವ ಶರೀರವನ್ನು ಮುಚ್ಚಲಾಗುತ್ತದೆ. ಪಾರ್ಥಿವ ಶರೀರದ ಶಿರೋಭಾಗವನ್ನು ಬಿಲ್ವಪತ್ರೆಯಿಂದ ತುಂಬಲಾಗುತ್ತದೆ. ಅದರ ಮೇಲೆ ಮೃತ್ತಿಕೆ ಅಂದರೆ ಮಣ್ಣು ಹಾಕಿ ಕೊನೆಗೆ ಚಪ್ಪಡಿ ಕಲ್ಲನ್ನಿಟ್ಟು ಅದರ ಮೇಲೆ ಗದ್ದುಗೆ ನಿರ್ಮಾಣ ಮಾಡಲಾಗುತ್ತದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಕುಮಾರ ಸ್ವಾಮೀಜಿ(111)ಯವರು ಸೋಮವಾರ ಬೆಳಗ್ಗೆ 11.44ರ ಸುಮಾರಿಗೆ ನಿಧನರಾಗಿದ್ದಾರೆ. ನಡೆದಾಡುವ ದೇವರು ಎಂದೇ ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿದ್ದಾರೆ. ಸ್ವಾಮೀಜಿ ನಿಧನರಾಗಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಲಕ್ಷಾಂತರ ಮಂದಿ ಭಕ್ತರು ಶ್ರೀಗ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಹರಿದುಬರುತ್ತಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಳಿಕ ಕ್ರಿಯಾ ಸಮಾಧಿಯ ವಿಧಿವಿಧಾನಗಳು ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos