ವೃತ್ತಿ ಶಿಕ್ಷಣ ಶುಲ್ಕ ಹೆಚ್ಚಳಕ್ಕೆ ಎಸ್.ಎಫ್.ಐ. ವಿರೋಧ!

ವೃತ್ತಿ ಶಿಕ್ಷಣ ಶುಲ್ಕ ಹೆಚ್ಚಳಕ್ಕೆ ಎಸ್.ಎಫ್.ಐ. ವಿರೋಧ!

ಬೆಂಗಳೂರು, ಮಾ.4, ನ್ಯೂಸ್ಎಕ್ಸ್ ಪ್ರೆಸ್‍:  ವೃತ್ತಿ ಶಿಕ್ಷಣ ಶುಲ್ಕ ಹೆಚ್ಚಳಕ್ಕೆ ಭಾರತ ವಿದ್ಯಾರ್ಥಿ ಫೆಡರೇಷನ್‍( ಎಸ್‍ಎಫ್‍ಐ) ರಾಜ್ಯ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಎಸ್‍ಎಫ್‍ಐ ರಾಜ್ಯ ಸಮಿತಿ, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ(ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆ) ಹೆಸರಿನಲ್ಲಿ ಇಡೀ ವೃತ್ತಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಲಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ಎಸ್‍ಎಫ್‍ ಐ ತೀವ್ರವಾಗಿ ಟೀಕಿಸಿದೆ.

ಈ ಬಾರಿಯ ವೃತ್ತಿ ಶಿಕ್ಷಣ ಸೀಟುಗಳಿಗೆ ಎಂಜನೀಯರ್ ವಿಭಾಗಕ್ಕೆ ಶೇ.10ರಷ್ಟು ಹೆಚ್ಚಿಸಿದೆ. ಮತ್ತು ವೈದ್ಯಕೀಯ ಹಾಗೂ ದಂತ ವೈಧ್ಯಕೀಯ ವಿಭಾಗಕ್ಕೆ ಶುಲ್ಕ ಹೆಚ್ಚಿಸಲು ಚಿಂತನೆ ನಡೆಸಿದೆ. ಸರಕಾರದ ಈ ನಡೆ ಹಣವುಳ್ಳವರಿಗೆ ಮಾತ್ರ ವೃತ್ತಿ ಶಿಕ್ಷಣ ಎನ್ನುವಂತಾಗಿದೆ. ಇದರಿಂದಾಗಿ ಲಕ್ಷಾಂತರ ಬಡ ವಿದ್ಯಾರ್ಥಿಗಳ ವೃತ್ತಿ ಶಿಕ್ಷಣ ಕಲಿಕೆಯ ಆಸೆಗೆ ಸರಕಾರ ಬೆಂಕಿ ಇಟ್ಟಂತಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಕಾಮೆಡ್ ಕೆ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಸರಕಾರದ ನಿಲುವನ್ನು ಎಸ್.ಎಫ್.ಐ. ಬಲವಾಗಿ ಖಂಡಿಸಿದೆ.

ಯಾವುದೇ ಕಾರಣಕ್ಕೂ 2006ರ ವೃತ್ತಿ ಶಿಕ್ಷಣ ಕಾಯ್ದೆಯನ್ನು ಜಾರಿ ಮಾಡುವುದಿಲ್ಲವೆಂದು ಹೇಳುತ್ತಿದ್ದ ಸರಕಾರ ಈಗ ಅದೇ ಕಾಯ್ದೆ ಅಡಿಯಲ್ಲಿ ಶುಲ್ಕಗಳನ್ನು ಹೆಚ್ಚಿಗೆ ಮಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡಲು ರಾಜ್ಯ ಸರಕಾರ ಮುಂದಾಗಿದೆ. ಕಳೆದ ವರ್ಷ ಎಂಜನಿಯರ್ ಸೀಟಿಗೆ ಶೇ.8ರಷ್ಟು ಶುಲ್ಕ ಹೆಚ್ಚಳ ಮಾಡಿದ್ದರು. ಖಾಸಗಿ ಇಂಜಿನಿಯರಿಂಗ್‍ ಕಾಲೇಜುಗಳ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಕಾಮೆಡ್-ಕೆ ಸೇರಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಶುಲ್ಕ ಹೆಚ್ಚಳ ಮಾಡಲು ಮುಂದಾಗಿದ್ದಾರೆ. ಖಾಸಗಿ ಶಾಲೆಗಳ ತಾಳಕ್ಕೆ ತಕ್ಕಂತೆ ಸಚಿವರು ಕುಣಿಯುತ್ತಿದ್ದಾರೆ ಎಂದು ಎಸ್‍ಎಫ್‍ಐ ಟೀಕಿಸಿದೆ.

ಮೊದಲನೇ ಸ್ಲ್ಯಾಬ್‍ನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸರ್ಕಾರಿ ಸೀಟುಗಳಿಗೆ 2018-19ನೇ ಸಾಲಿನಲ್ಲಿ 53,460 ರೂ. ನಿಗದಿಯಾಗಿತ್ತು. ಅದನ್ನು 2019-20ನೇ ಸಾಲಿಗೆ 58,800 ರೂ.ಗೆ ಪರಿಷ್ಕರಿಸಲಾಗಿದೆ. 2ನೇ ಸ್ಲ್ಯಾಬ್ 2018-19ನೇ ಸಾಲಿನಲ್ಲಿ 59,400 ರೂ. ಇದ್ದ ಶುಲ್ಕವನ್ನು 65,340 ರೂ.ಗೆ ಪರಿಷ್ಕರಿಸಲಾಗಿದೆ. ಹಾಗೆಯೇ ಕಾಮೆಡ್-ಕೆ ಸೀಟುಗಳನ್ನು ಮೊದಲ ಸ್ಲ್ಯಾಬ್‍ನಲ್ಲಿ 2018-19ರಲ್ಲಿ 1,30,680 ರೂ. ಶುಲ್ಕವನ್ನು 1,43,748 ರೂ.ಗೆ ಹೆಚ್ಚಿಸಲಾಗಿದೆ. 2ನೇ ಸ್ಲ್ಯಾಬ್‍ನಲ್ಲಿ 1,83,600 ರೂ. ಇದ್ದ ಶುಲ್ಕವನ್ನು 2,01,960 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಈ ಪ್ರಮಾಣದ ಹಣವನ್ನು ಕಟ್ಟಲು ಬಡ ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ. ಬಡ, ದಲಿತ,ಹಿಂದುಳಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣವನ್ನು ದೂರವಾಗಿಸುವ ಹುನ್ನಾರ ಇದಾಗಿದೆ. ಈ ಪ್ರಮಾಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಣ ವಸೂಲಿ ಮಾಡಲು ಸರಕಾರವೇ ಅಧಿಕೃತವಾಗಿ ಅನುಮತಿ ನೀಡಿದರೆ ವೃತ್ತಿ ಶಿಕ್ಷಣ ಒಂದು ಮಾಫಿಯವಾಗಿ ಬೆಳೆಯಲಿದೆ ಎಂದು ಎಸ್‍ಎಫ್‍ಐ ಆತಂಕ ವ್ಯಕ್ತಪಡಿಸಿದೆ.

ಈಗಾಗಲೇ ಎಜೆಂಟರುಗಳ ಹಾವಳಿಯಿಂದ ಲಕ್ಷಾಂತರ ರೂ. ಹಣವನ್ನು ಖಾಸಗಿ ಕಾಲೇಜುಗಳು ಪಡೆಯುತ್ತಿವೆ. ಸರಕಾರ ಇದಕ್ಕೆ ಕಡಿವಾಣ ಹಾಕದೆ ಹಲ್ಲುಕಿತ್ತ ಹಾವಿನಂತಾಗಿದೆ. ಕಳೆದ ಬಾರಿ ಶುಲ್ಕ ಹೆಚ್ಚಳದ ಪರಿಣಾಮವಾಗಿ ಸುಮಾರು 22 ಸಾವಿರ ಇಂಜನಿಯರಿಂಗ್- ಮೆಡಿಕಲ್ ಸೀಟುಗಳು ಖಾಲಿ ಬಿದ್ದಿವೆ. ಈಗ ಮತ್ತೆ ಶುಲ್ಕ ಏರಿಸಲು ಹೊರಟಿರುವ ಸರಕಾರದ ನಿರ್ಧಾರ ಭಾರೀ ಅಪಾಯಕಾರಿಯಾಗಿದೆ ಎಂದು ಎಸ್‍ಎಫ್‍ಐ ಹೇಳಿದೆ.

ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿಯದೆ ವಿದ್ಯಾರ್ಥಿಗಳ ಹಿತ ಕಾಪಾಡಲು ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಸರಕಾರವನ್ನು ಒತ್ತಾಯಿಸಿದೆ.

ಬೇಡಿಕೆಗಳು:

1.ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ಮತ್ತು ಶುಲ್ಕ ನಿಗದಿ) ಕಾಯ್ದೆ 2006ನ್ನು ತಿರಸ್ಕರಿಸಬೇಕು.

2.ಈಗಾಗಲೇ ಏರಿಕೆ ಮಾಡಿರುವ ಶುಲ್ಕಗಳನ್ನು  ತಕ್ಷಣ ಬಡ ವಿದ್ಯಾರ್ಥಿಗಳ ಕೈಗೆಟುಕುವಂತೆ ನಿಗದಿಗೊಳಿಸಿ.

3.ಖಾಸಗಿ ಕಾಲೇಜುಗಳಿಗೆ ಹಂಚುವ ಸರ್ಕಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸೀಟುಹಂಚಿಕೆ 75:25ರ ಅನುಪಾತದಲ್ಲಿರಬೇಕು.

4.ಸರ್ಕಾರಿ ಸಿ.ಇ.ಟಿ. ಮೂಲಕವೇ ಪ್ರವೇಶ ನಡೆಸಬೇಕು. ಪ್ರವೇಶ ಮತ್ತು ಶುಲ್ಕ ನಿಗದಿಗೊಳಿಸಲಿಕ್ಕೆ ಖಾಸಗೀ ಕಾಲೇಜುಗಳಿಗೆ ಅಧಿಕಾರ ನೀಡುತ್ತಿರುವ ನ್ಯಾ.ಗುಂಜಾಳ, ನ್ಯಾ.ಜಗನಾಥ್ ವರದಿ ತಿರಸ್ಕರಿಸಬೇಕು.

5.ಖಾಸಗೀ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುವ ಕೇಂದ್ರೀಯ ಶಾಸನವನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು.

7.ಸಿ.ಇ.ಟಿ ಅಕ್ರಮ ಸೀಟು ಮಾರಾಟ ದಂಧೆಯ ಜಾಲವನ್ನು ತಕ್ಷಣ  ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಕಠಿಣ ಕಾನೂನು ಶಿಕ್ಷೆಗೊಳಪಡಿಸಬೇಕು.

8.ಇರುವ ಎಲ್ಲಾ ಸರ್ಕಾರಿ ಕಾಲೇಜುಗಳಿಗೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸಬೇಕು.

9.ಹೊಸ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿಬೇಕು.

ಫ್ರೆಶ್ ನ್ಯೂಸ್

Latest Posts

Featured Videos