ಎಸ್​ಸಿ, ಎಸ್​ಟಿ ಬಡ್ತಿ ಮೀಸಲಾತಿ: ರಾಜ್ಯ ಸರ್ಕಾರದ ಕಾಯ್ದೆಗೆ ಸುಪ್ರೀಂ ಅಸ್ತು

ಎಸ್​ಸಿ, ಎಸ್​ಟಿ ಬಡ್ತಿ ಮೀಸಲಾತಿ: ರಾಜ್ಯ ಸರ್ಕಾರದ ಕಾಯ್ದೆಗೆ ಸುಪ್ರೀಂ ಅಸ್ತು

ನವದೆಹಲಿ, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ಎಸ್​ಸಿ, ಎಸ್​ಟಿ ಬಡ್ತಿ ಮೀಸಲಾತಿ; ರಾಜ್ಯ ಸರ್ಕಾರದ ಕಾಯ್ದೆಗೆ ಸುಪ್ರೀಂ ಕೋರ್ಟ್ ಅಸ್ತು ಬಡ್ತಿ ಮೀಸಲಾತಿ ಕಾಯ್ದೆಯನ್ನು ಕರ್ನಾಟಕ ಸರ್ಕಾರ 2017ರಲ್ಲಿ ಸುಗ್ರೀವಾಜ್ಞೆ ಮೂಲಕ  ಜಾರಿಗೆ ತಂದಿತ್ತು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎಸ್​ಸಿ, ಎಸ್​ಟಿ  ಬಡ್ತಿ ಮೀಸಲಾತಿ ಕಾಯ್ದೆ 2002ನ್ನು ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠ ಎತ್ತಿ ಹಿಡಿದಿದೆ. ಇದರೊಂದಿಗೆ ಸರ್ಕಾರ ಮೇಲುಗೈ ಸಾಧಿಸಿದಂತಾಗಿದೆ. ಎಸ್​ಸಿ ಎಸ್​ಟಿ ​ಸರ್ಕಾರಿ ನೌಕರರಿಗೆ ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ 2002ರಲ್ಲಿ ತರಲು ಉದ್ದೇಶಿಸಿದ್ದ ಬಡ್ತಿ ಮೀಸಲಾತಿ ಕಾಯ್ದೆಯನ್ನು ಅನೇಕ ವಿರೋಧಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ 2017ರಲ್ಲಿ ಸುಗ್ರೀವಾಜ್ಞೆ ಮೂಲಕ  ಜಾರಿಗೆ ತಂದಿದ್ದರು. ಆದರೆ, ಈ ಕಾಯ್ದೆಯ ಮೂಲಕ ಬಡ್ತಿ ವಿಚಾರದಲ್ಲಿ ಸಾಮಾನ್ಯ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂದು  ಪ್ರಶ್ನಿಸಿ ಬಿ.ಕೆ. ಪವಿತ್ರ ಹಾಗೂ ಎಂ. ನಾಗರಾಜ್ ಎಂಬುವವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.  ಬಡ್ತಿ ಮೀಸಲಾತಿ ಕುರಿತು ಸಲ್ಲಿಕೆಯಾಗಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಪರಿಣಾಮ ರಾಜ್ಯ ಸರ್ಕಾರ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಬಿ.ಕೆ. ಪವಿತ್ರ ಅವರಿಗೆ ಹಿನ್ನಡೆಯಾಗಿದೆ.

ರಾಜ್ಯದಲ್ಲಿ ಬಡ್ತಿ ಮೀಸಲಾತಿ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. ಹಿಂದುಳಿದ ವರ್ಗಗಳ ನಿರಂತರ ಬೇಡಿಕೆಗೆ ಕೊನೆಗೂ ಕಿವಿಯಾಗಿದ್ದ ರಾಜ್ಯ ಸರ್ಕಾರ 2002ರಲ್ಲಿ ಹೊಸದಾಗಿ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಿಸಲು ಉದ್ದೇಶಿಸಿತ್ತು. 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಡ್ತಿ ಮೀಸಲಾತಿಯನ್ನು ಪರಿಷ್ಕೃತಗೊಳಿಸಿ ಜಾರಿಗೆ ತರಲು ಮುಂದಾಗಿದ್ದರು. ಆ ಸಮಯದಲ್ಲಿ ದಲಿತ ಜನಾಂಗಕ್ಕೆ ಸೇರಿದ ಶ್ರೀಮತಿ ಕೆ. ರತ್ನಪ್ರಭಾ ಅವರು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ನಂತರ ಮುಖ್ಯ ಕಾರ್ಯದರ್ಶಿಯಾಗಿ ಕಾಯ್ದೆ ಜಾರಿಯಾಗಲು ಶ್ರಮಿಸಿದ್ದರು. ಉಭಯ ಸದನಗಳಲ್ಲೂ ಸಮ್ಮತಿ ಪಡೆದ ಈ ಕಾಯ್ದೆ ಅಂತಿಮವಾಗಿ ರಾಷ್ಟ್ರಪತಿ ಅಂಕಿತದೊಂದಿಗೆ 2017ರಲ್ಲಿ ಜಾರಿಯಾಗಿತ್ತು. ಇದರ ಪ್ರಕಾರ ಸೇವಾ ಹಿರಿತನದ ಮೇಲೆ ಬಡ್ತಿ ನೀಡದೆ ಮೀಸಲಾತಿ ಆಧಾರದ ಮೇಲೆ ಬಡ್ತಿ ನೀಡಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರದ ಈ ಕಾಯ್ದೆಯಿಂದ ಎಲ್ಲಾ ಹಿರಿಯ ಹುದ್ದೆಗಳು ಮೀಸಲಾತಿ ಪಡೆಯುವವರ ಪಾಲಾಗುತ್ತದೆ ಎಂದು ಆರೋಪಿಸಿ ಬಿ.ಕೆ. ಪವಿತ್ರ ಹಾಗೂ ಎಂ. ನಾಗರಾಜು ಸುಪ್ರೀಂ ಮೆಟ್ಟಿಲೇರಿದ್ದರು. ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ 2017ರ ಫೆಬ್ರವರಿಯಲ್ಲಿ ಬಡ್ತಿ ಮೀಸಲಾತಿಯನ್ನು ರದ್ದುಪಡಿಸಿ ಆದೇಶ ನೀಡಿತ್ತು. ಬಡ್ತಿ ನೀಡುವ ವೇಳೆ ಪ್ರಾತಿನಿಧ್ಯ ಕೊರತೆ, ಕಾರ್ಯದಕ್ಷತೆ ಹಾಗೂ ಹಿಂದುಳಿದಿರುವಿಕೆಯ ಮೂರು ಅಂಶಗಳನ್ನು ಪರಿಗಣಿಸಬೇಕು. ಬಡ್ತಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವ ವೇಳೆ ನೌಕರರ ಆಡಳಿತಾತ್ಮಕ ಸಾಮರ್ಥ್ಯ ಹಿಂದುಳಿದಿರುವಿಕೆಯ ದತ್ತಾಂಶ ಅಗತ್ಯ ಎಂದು ಸುಪ್ರೀಂ ಪ್ರತಿಪಾದಿಸಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಆಧಾರದ ಮೇಲಿನ ಬಡ್ತಿ ರದ್ದಾಗಿತ್ತು. ಅಲ್ಲದೆ ಪ್ರಕರಣದಲ್ಲಿ 2017ರ ಮೇ 1ರೊಳಗಾಗಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ದಪಡಿಸಿ ಮೀಸಲಾತಿ ಆಧಾರದ ಮೇಲೆ ನಿಯಮ ಬಾಹಿರವಾಗಿ ಬಡ್ತಿ ಹೊಂದಿದವರನ್ನು ಹಿಂಬಡ್ತಿಗೆ ಗುರಿ ಮಾಡುವಂತೆಯೂ ಆದೇಶಿಸಲಾಗಿತ್ತು. ಪರಿಣಾಮ ರಾಜ್ಯ ಸರ್ಕಾರದ 3,900 ಅಧಿಕಾರಿಗಳು ಹಾಗೂ 8,500 ನೌಕರರು ಹಿಂಬಡ್ತಿಗೆ ಗುರಿಯಾಗುವ ಭೀತಿ ಎದುರಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ರಕ್ಷಣಗೆ ಮುಂದಾಗಿದ್ದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 2017 ಆಗಸ್ಟ್​ 7 ರಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಬಡ್ತಿ ಮೀಸಲಾತಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಹೊರಡಿಸಲು ನಿಶ್ಚಯಿಸಿತ್ತು. ಕಾಯ್ದೆಯನ್ನು ಆಗಸ್ಟ್​ 8 ರಂದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ‘ಸುಗ್ರೀವಾಜ್ಞೆ ತರುವ ತುರ್ತು ಏನಿದೆ?’ ಎಂದು ಪ್ರಶ್ನಿಸಿ ವಿಧಾನಮಂಡಲ ಅಧಿವೇಶನ ಕರೆದು ಎಲ್ಲರ ಸಮ್ಮತಿ ಪಡೆಯಿರಿ ಎಂದು ತಾಕೀತು ಮಾಡಿದ್ದರು. ಇದರಂತೆ 2017ರ ನವೆಂಬರ್​ನಲ್ಲಿ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಿದ ರಾಜ್ಯ ಸರ್ಕಾರ ಅಂತಿಮವಾಗಿ ರಾಷ್ಟ್ರಪತಿಗಳ ಅಂಕಿತವನ್ನೂ ಪಡೆಯುವಲ್ಲಿ ಸಫಲವಾಗಿತ್ತು. ಆದರೆ, ರಾಜ್ಯ ಸರ್ಕಾರದ ಬಡ್ತಿ ಮೀಸಲಾತಿ ಕಾಯ್ದೆ ಹಾಗೂ ಬಡ್ತಿ ಮೀಸಲಾತಿ ರದ್ದು ಪಡಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಬಿ.ಕೆ. ಪವಿತ್ರ ಹಾಗೂ ಎಂ. ನಾಗರಾಜ್ ಸರ್ವೊಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾತ್ರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾಯ್ದೆಯ ಮೇಲಿನ ತೂಗುಗತ್ತೆಯಂತೆಯೇ ಭಾಸವಾಗಿತ್ತು. ಈ ನಡುವೆ ಎಸ್​ಸಿ ಎಸ್​ಟಿ ನೌಕರರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುವಂತೆ ಸುಪ್ರೀಂಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಇಂದು ಈ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿಸದ್ಯ ಪೀಠ ಕೊನೆಗೂ ರಾಜ್ಯ ಸರ್ಕಾರದ ಕಾಯ್ದೆಯನ್ನು ಎತ್ತಿಹಿಡಿದಿದೆ. ಇದರೊಂದಿಗೆ ದಶಕಗಳ ಬಡ್ತಿ ಮೀಸಲಾತಿ ಚರ್ಚೆಗೆ ಸುಪ್ರೀಂ ಕೋರ್ಟ್ ಕೊನೆಗೂ ತಾತ್ವಿಕ ಅಂತ್ಯ ಕಲ್ಪಿಸುವಲ್ಲಿ ಸಫಲವಾಗಿದೆ. ಪರಿಣಾಮ ಹಿಂಬಡ್ತಿ ಭೀತಿಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರು ನಿಟ್ಟುಸಿರು ಬಿಡುವಂತಾಗಿದೆ.

ಎಸ್​ಸಿ ಎಸ್​ಟಿ ​ಸರ್ಕಾರಿ ನೌಕರರಿಗೆ ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡುವ ರಾಜ್ಯ ಸರ್ಕಾರದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು ಇದಕ್ಕೆ ಮಾಜಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ಕೆ. ರತ್ನಪ್ರಭಾ ಅವರು ಸಂತಸ ವ್ಯಕ್ಯಪಡಿಸಿದ್ದಾರೆ.  ಅವರು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ಎಸ್​ಸಿ ಎಸ್​ಟಿ ನೌಕರರಿಗೆ ಅನುಕೂಲವಾಗಲೆಂದು ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡುವ ಕಾಯ್ದೆ ಜಾರಿಗೆ ಬರಲು ಶ್ರಮಿಸಿದ್ದರು. ಇದರಿಂದ ಉಪಕೃತರಾದ ಸುಮಾರು 40 ಸಾವಿರಕ್ಕೂ ಹೆಚ್ಚು ನೌಕರರು ಶ್ರೀಮತಿ ಕೆ. ರತ್ನಪ್ರಭಾ ಅವರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, “ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್​ ಎತ್ತಿಹಿಡಿದಿರುವುದು ಉತ್ತಮ ಬೆಳವಣಿಗೆ. ಈ ಕಾಯ್ದೆಯ ಮೂಲಕ ಸಮಾಜದಲ್ಲಿ ಪ.ಜಾತಿ/ಪ.ಪಂಗಡದ ಸರ್ಕಾರಿ ಕ್ಷೇತ್ರದಲ್ಲಿನ ಪ್ರಮುಖ ಹುದ್ದೆಗಳು ದೊರಕಲಿವೆ. ಈ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos