ಮಹಿಳಾ ಮೇಯರ್ ಸಾಧನೆಯ ತೃಪ್ತಿ

ಮಹಿಳಾ ಮೇಯರ್ ಸಾಧನೆಯ ತೃಪ್ತಿ

ಬೆಂಗಳೂರು, ಸೆ. 27: ಕಳೆದ ಒಂದು ವರ್ಷದ ಅಧಿಕಾರಾವಧಿಯಲ್ಲಿ ನಗರದ ಅಭಿವೃದ್ಧಿ ಹಾಗೂ ಪಂಚಸೂತ್ರ ಯೋಜನೆಗಳನ್ನು ಗುರಿ ಮೀರಿ ಸಾಧನೆ ಮಾಡಲಾಗಿದ್ದು, ಮುಂದೆ ಬರುವ ಮೇಯರ್ ಮುಂದೆ ಸವಾಲುಗಳಿವೆ. ಆದರೂ, ಅವರೊಂದಿಗೆ ಉತ್ತಮ ಬಾಂಧವ್ಯದ ಮೂಲಕ ಅಭಿವೃದ್ಧಿಗೆ ಶ್ರಮಿಸಲು ಕೈಜೋಡಿಸುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ ನಲ್ಲಿ ತಮ್ಮ ಮೇಯರ್ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತಮ್ಮ ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಜನಪರ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಪತ್ರಕರ್ತರು ಹಾಗೂ ಸಾರ್ವಜನಿಕರ ನಡುವೆ ನಡೆದ ಸಂವಾದದಲ್ಲಿ ಹಂಚಿಕೊಂಡರು.

ನಗರದಲ್ಲಿ ನಡೆಯುತ್ತಿದ್ದ ರಸ್ತೆ, ಚರಂಡಿ, ಸ್ವಚ್ಛತೆ, ಕಸ ನಿರ್ವಹಣೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಚುರುಕು ಮುಟ್ಟಿಸಲಾಗಿದೆ. ಅಧಿಕಾರಿಗಳೊಂದಿಗೆ ಪ್ರತಿ ಹಂತದಲ್ಲೂ ಸಂಪರ್ಕ ಇಟ್ಟುಕೊಂಡ ಕಾರಣ ನಿಗದಿತ ಗುರಿ ಮುಟ್ಟಲು ಸಾಧ್ಯವಾಯಿತು ಎಂದರು.

ಪ್ರತಿ ತಿಂಗಳ ಶನಿವಾರದಂದು ನಗರದ 198 ವಾರ್ಡ್ಗಳಲ್ಲಿ ಸಭೆ ನಡೆಸಿ ಸಾರ್ವಜನಿಕರ ಹಾಗೂ ವಾರ್ಡ್ ಸಮಸ್ಯೆಗಳನ್ನು ತಿಳಿದುಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.

ಸೋರಿಕೆಯಾಗುತ್ತಿದ್ದ ತೆರಿಗೆ ಪಾವತಿಗೆ ಕಡಿವಾಣ ಹಾಕಿ ಮನೆಮನೆಗೆ ಹೋಗಿ ತೆರಿಗೆ ವಸೂಲಿ ಕ್ರಮ ಕೈಗೊಂಡೆವು. ತೆರಿಗೆ ವಂಚಕರನ್ನು ಪತ್ತೆ ಹಚ್ಚಿ, ಸಾಕಷ್ಟು ಕಾಲಾವಧಿ ನೀಡಿದರೂ ತೆರಿಗೆ ಪಾವತಿ ಮಾಡದ ತೆರಿಗೆ ವಂಚಕರಿಂದ ದಂಡ ವಸೂಲಿ ಮಾಡಲಾಯಿತು. ಇನ್ನೂ ಕೆಲವು ಮಾಲೀಕರ ಕಟ್ಟಡಗಳಿಗೆ ಕಾನೂನು ಪ್ರಕಾರ ಬೀಗ ಹಾಕಿಸಲಾಯಿತು ಎಂದು ಹೇಳಿದರು.

ಪ್ಲಾಸ್ಟಿಕ್ ನಿಷೇಧ: ನಗರದಲ್ಲಿ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿಷೇಧ ಮಾಡಿ, ಕಾನೂನು ಅರಿವು ಮೂಡಿಸಲು ಶಾಲಾ ಮಕ್ಕಳಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರಿಂದ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಬಹುತೇಕ ಕಡಿಮೆಯಾಗಿದೆ. ಪಿಒಪಿ ಗಣಪತಿಗಳ ಪ್ರತಿಷ್ಠಾಪನೆ ನಿಷೇಧ ಮಾಡಿ ಪರಿಸರ ಸ್ನೇಹಿ ಗಣಪತಿ ಸ್ಥಾಪನೆಗೆ ಕ್ರಮ ಕೈಗೊಂಡಿದ್ದು, ನನಗೆ ತೃಪ್ತಿ ತಂದಿದೆ ಎಂದು ತಿಳಿಸಿದರು.

ಮಹಿಳಾ ಮೇಯರ್ ಆಗಿ ಒಂದು ವರ್ಷದ ಅವಧಿಯಲ್ಲಿ ನಾನು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ತೃಪ್ತಿಯಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಬಿಎಂಪಿಗೆ ಸೇರಿದ ಹನ್ನೊಂದು ಕಟ್ಟಡಗಳನ್ನು ಅಡಮಾನ ಇಟ್ಟು ಹನ್ನೊಂದು ಸಾವಿರ ಕೋಟಿ ರೂ. ಸಾಲ ಮಾಡಲಾಗಿತ್ತು. ಈ ಪೈಕಿ ಮಾರುಕಟ್ಟೆ ಕಟ್ಟಡವೊಂದನ್ನು ಬಿಟ್ಟು ಉಳಿದೆಲ್ಲ ಕಟ್ಟಡಗಳನ್ನು ಬಿಡಿಸಿಕೊಳ್ಳಲಾಗಿದೆ ಎಂದರು.

ಇದು ನನ್ನ ಅವಧಿಯ ಐತಿಹಾಸಿಕ ಸಾಧನೆ. ಟೆಂಡರ್ ಶೂರ್, ವೈಟ್ ಟಾಪಿಂಗ್, ವಾಯು ಶುದ್ಧೀಕರಣ ಘಟಕ, ಸ್ಥಗಿತಗೊಂಡಿದ್ದ ಹಸಿರು ಬೆಂಗಳೂರು ಯೋಜನೆಗೆ ಮರು ಚಾಲನೆ ನೀಡಲಾಗಿದ್ದು, ಮುಂಬರುವ ಮೇಯರ್ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.

ಈ ನಡುವೆ ವೈಟ್ ಟಾಪಿಂಗ್ ಯೋಜನೆಯಲ್ಲಿ ಅಕ್ರಮವಾಗಿ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಈಗಾಗಲೇ ತನಿಖೆ ಮಾಡಲು ಸೂಚಿಸಿದ್ದಾರೆ. ಅದಕ್ಕೆ ನನ್ನ ಸಹಮತವಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.

ನೆನೆಗುದಿಗೆ ಬಿದ್ದಿದ್ದ ವಿಲೇವಾರಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕಿದೆ ಎಂದು ತಿಳಿಸಿದರು.

 

 

 

ಫ್ರೆಶ್ ನ್ಯೂಸ್

Latest Posts

Featured Videos