ಖಾತಾ ವಂಚಿತರ ಬೆನ್ನುಲುಬಿಗೆ ಸತೀಶ್ ರೆಡ್ಡಿ

ಖಾತಾ ವಂಚಿತರ ಬೆನ್ನುಲುಬಿಗೆ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ, ಡಿ. 13 : ನಲವತ್ತು ವರ್ಷಗಳ ಹಿಂದೆ ಹಕ್ಕುಪತ್ರಗಳನ್ನು ಪಡೆದಿದ್ದ ಫಲಾನುಭವಿಗಳಿಗೆ ಖಾತಾ ಹಾಗೂ ನಕ್ಷೆ ಮಂಜೂರಾತಿ ಭಾಗ್ಯವಿಲ್ಲದೆ ಬ್ಯಾಂಕ್ ಲೋನ್‌ಗಳಿಂದ ವಂಚಿತರಾಗಿದ್ದ ಸಿಂಗಸಂದ್ರ ಜನತೆಗೆ ಇಂದು ಬಿಬಿಎಂಪಿ ವತಿಯಿಂದ ಖಾತಾ ನೀಡಿ ನ್ಯಾಯ ನೀಡಿದಂತಾಯಿತೆಂದು ಶಾಸಕ ಎಂ. ಸತೀಶ್ ರೆಡ್ಡಿ ನುಡಿದರು. ಇಂದು ಸಿಂಗಸಂದ್ರ ವಾರ್ಡ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ. ಸತೀಶ್ ರೆಡ್ಡಿಯವರು ಬ್ಯಾಂಕ್ ಲೋನ್ ಪಡೆದು ಮನೆ ಕಟ್ಟಿಕೊಳ್ಳಬೇಕಾದರೆ ಬಿಬಿಎಂಪಿ ಖಾತಾ ಹಾಗೂ ನಕ್ಷೆ ಮಂಜೂರಾತಿ ಅತ್ಯಗತ್ಯ. ಆದರೆ, ಬಡವರು 4೦ ವರ್ಷಗಳಿಂದ ಖಾತಾ ಇಲ್ಲದೆ ಯಾವುದೇ ಸೌಲಭ್ಯ ದೊರಕದೆ ವಂಚಿತರಾಗಿದ್ದರು. ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಬೆಂಗಳೂರು ನಗರದಲ್ಲಿಯೇ ಪ್ರಪ್ರಥಮ ಬಾರಿಗೆ ಹಕ್ಕುಪತ್ರ ಮಾಲೀಕರಿಗೆ ಖಾತಾ ಭಾಗ್ಯ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕೇಂದ್ರದಲ್ಲಿ, ರಾಜ್ಯದಲ್ಲಿ, ಬಿಬಿಎಂಪಿಯಲ್ಲಿಯೂ ಬಿಜೆಪಿ ಅಧಿಕಾರದಲ್ಲಿರುವುದರಿಂದ ಇನ್ನು ಮುಂದೆ ಅಭಿವೃದ್ಧಿ ಸಾಧ್ಯವಾಗಲಿದೆ. ಸಿಂಗಸಂದ್ರ ವಾರ್ಡ್ನ ಸರ್ವತೋಮುಖ ಅಭಿವೃದ್ಧಿಗೆ 5೦ ಕೋಟಿ ನೀಡಲಾಗಿದ್ದು ಎರಡು ತಿಂಗಳೊಳಗೆ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ನುಡಿದರು.

ಸಿಂಗಸಂದ್ರ ವಾರ್ಡ್ನ ಪಾಲಿಕೆ ಸದಸ್ಯೆ ಶಾಂತಾ ಬಾಬುರವರು ಮಾತನಾಡುತ್ತಾ ಬಡವರ ಎಷ್ಟೋ ವರ್ಷಗಳ ಕನಸು ಇಂದು ನನಸಾಗಿದೆ. ಇವೆಲ್ಲವೂ ಶಾಸಕ ಎಂ. ಸತೀಶ್ ರೆಡ್ಡಿಯವರಿಂದ ಸಾಧ್ಯವಾಯಿತೆಂದು ವಾರ್ಡ್ನ ಜನತೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು. ನಮ್ಮ ವಾರ್ಡ್ನಲ್ಲಿ ಸುಮಾರು 12೦೦ ಹಕ್ಕುಪತ್ರದಾರರಿಗೆ ಖಾತಾ ಭಾಗ್ಯ ಸಿಗಲಿದೆ. 1ನೇ ಹಂತದಲ್ಲಿ 5೦೦ ಜನರಿಗೆ ಹಾಗೂ 2ನೇ ಹಂತದಲ್ಲಿ ಉಳಿದವರಿಗೆ ಖಾತಾ ದೊರಕಲಿದೆ ಎಂದರು. ಕಾರ‍್ಯಕ್ರಮದಲ್ಲಿ ಫಲಾನುಭವಿಗಳಿಗೆ ಭಾಗ್ಯಲಕ್ಮೀ ಬಾಂಡ್ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಶ್ರೀನಿವಾಸ್ ರೆಡ್ಡಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಣಿ ಶ್ರೀನಿವಾಸ ರೆಡ್ಡಿ, ವಾರ್ಡ್ ಅಧ್ಯಕ್ಷ ಗಣೇಶ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಜಿಮ್ ಬಾಬುರವರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos