ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ

ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ

ಮಂಗಳೂರು, ಸೆ. 6: ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ, ಉತ್ತಮ ಸೇವೆ ಸಲ್ಲಿಸಿದ್ದ ಅವರು ಇಂದು ತಮ್ಮ ಐಎಎಸ್ ಸೇವೆಗೆ ರಾಜೀನಾಮೆ ನೀಡಿದ್ದಾರೆ.

ತಮಿಳುನಾಡು ಮೂಲದವರಾದ ಸಸಿಕಾಂತ್ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರ್ ಪದವೀಧರರು. ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ದ.ಕ ಜಿಲ್ಲಾಧಿಕಾರಿಗೂ ಮುಂಚೆ ಇವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಸಿಕಾಂತ್, ತಮ್ಮ ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಅರ್ಧದಲ್ಲಿಯೇ ರಾಜೀನಾಮೆ ನೀಡಿ ತೆರಳುತ್ತಿರುವುದಕ್ಕೆ, ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಸಸಿಕಾಂತ್​ ಸೆಂತಿಲ್​ ಪತ್ರ:

ಪ್ರಿಯ ಸ್ನೇಹಿತರೇ,

ನಾನು ಇಂದು ನನ್ನ ಭಾರತೀಯ ಆಡಳಿತಾತ್ಮಕ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ರಾಜೀನಾಮೆಗೆ ವೈಯಕ್ತಿಕ ಕಾರಣಗಳಿವೆಯೇ ಹೊರತು ಯಾವುದೇ ವೈಮನಸ್ಸಿಲ್ಲ. ನನ್ನ ಸದ್ಯದ ಮಂಗಳೂರು ಡಿಸಿ ಪೋಸ್ಟ್​ಗೂ ರಾಜೀನಾಮೆಗೂ ಸಂಬಂಧವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನ ಮತ್ತು ಅಧಿಕಾರಿಗಳಿಗೆ ನಾನು ಈ ಸಂದರ್ಭದಲ್ಲಿ ಕ್ಷಮೆ ಕೋರಲು ಇಚ್ಚಿಸುತ್ತೇನೆ. ಅವರ ಜತೆ ಕೆಲಸ ಮಾಡಿದ್ದು, ಅವಿಸ್ಮರಣೀಯ. ಅರ್ಧದಲ್ಲೇ ರಾಜೀನಾಮೆ ನೀಡಿ ಹೋಗುತ್ತಿರುವುದಕ್ಕೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ.

ದೇಶದ ಸಂವಿಧಾನದ ಮೂಲ ಆಶಯಗಳು ಹಾದಿ ತಪ್ಪುತ್ತಿರುವ ಈ ದಿನಗಳಲ್ಲಿ ನಾನು ಭಾರತೀಯ ಆಡಳಿತಾತ್ಮಕ ಸೇವೆಯಲ್ಲಿ ಮುಂದುವರೆಯುವುದು ನನಗೆ ಸಮಂಜಸವೆನಿಸುತ್ತಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ಪ್ರಜಾಪ್ರಭುತ್ವದ ತಳಹದಿ ಕುಸಿಯುತ್ತಿರುವಾಗ ನೈತಿಕವಾಗಿ ನನಗೆ ಈ ವೃತ್ತಿಯಲ್ಲಿ ಇರಲು ಇಷ್ಟವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಮಯ ಸ್ಥಿತಿ ಇನ್ನಷ್ಟು ಉಲ್ಬಣವಾಗಲಿದೆ. ನಾನು ಐಎಎಸ್​ ವೃತ್ತಿಯ ಆಚೆಗಿದ್ದರೆ ದೇಶದ ಅಭಿವೃದ್ಧಿಗಾಗಿ, ಜನರಿಗಾಗಿ ಇನ್ನಷ್ಟು ಹೆಚ್ಚು ಕೆಲಸ ಮಾಡಬಹುದು. ಎಲ್ಲಾ ಅದರಪಾಡಿಗೆ ಆಗಲಿ ಎಂದು ಸುಮ್ಮನಾಗಲು ಇನ್ನು ಸಾಧ್ಯವಿಲ್ಲ.

ಇನ್ನೊಮ್ಮೆ ನನ್ನ ಜತೆ ಕೆಲಸ ಮಾಡಿದ ಎಲ್ಲರಿಗೂ, ರಾಜ್ಯದ ಜನರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಸಹೋದ್ಯೋಗಿಗಳು ಮತ್ತು ಅವರ ಕುಟುಂಬಸ್ಥರು ಸಂತಸದಿಂದಿರಲಿ ಎಂದು ಆಶಯಿಸುತ್ತೇನೆ.

ಎಸ್​. ಸಸಿಕಾಂತ್​ ಸೆಂತಿಲ್

 

ಫ್ರೆಶ್ ನ್ಯೂಸ್

Latest Posts

Featured Videos