ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್

ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್

ಬೆಂಗಳೂರು, ಡಿ. 30: ದೂರದ ಊರುಗಳಿಂದ ಬಸ್‌ನಲ್ಲಿ ನಗರಕ್ಕೆ ಬರುವ  ಮಹಿಳೆಯರಿಗೆ ದಿಢೀರ್ ಸ್ಯಾನಿಟರಿ ನ್ಯಾಪ್‌ಕಿನ್‌ನ ಅಗತ್ಯವಿದ್ದರೆ ಮೆಡಿಕಲ್ ಸ್ಟೋರ್, ಅಂಗಡಿ ಮಳಿಗೆಯನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳಲ್ಲೇ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಸಿಗಲಿವೆ.

ವಿನೂತನ ಕಾರ್ಯ ಯೋಜನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದೇ ಮೊದಲ ಬಾರಿಗೆ ಇಂತಹ ವಿನೂತನ ಕಾರ್ಯ ಯೋಜನೆಯನ್ನು ಆರಂಭಿಸಿದೆ. ಅಕ್ಟೋಬರ್ 2ರಂದು ಸ್ವಚ್ಛತಾ ಅಭಿಯಾನದ ವೇಳೆ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಹೊಸ ನ್ಯಾಪ್‌ಕಿನ್ ಪೂರೈಸುವ ಹಾಗೂ ಬಳಸಿದ ನ್ಯಾಪ್‌ಕಿನ್‌ನ್ನು ಸುಡುವ ಯಂತ್ರ ಅಳವಡಿಸಲಾಯಿತು. ಇದಕ್ಕೆ ಮಹಿಳೆಯರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಪ್ರಮುಖ 10 ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ನ್ಯಾಪ್‌ಕಿನ್ ಯಂತ್ರಗಳನ್ನು ಅಳವಡಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಯೋಜನೆ ನೆರವಾಗವಾಗುತ್ತಿದೆ.

ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೂ ವಿಸ್ತರಣೆ

ಮೆಜೆಸ್ಟಿಕ್ ರಾಜ್ಯದ ಎಲ್ಲ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೂ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಕೇಂದ್ರವಾಗಿದೆ. ನ್ಯಾಪ್‌ಕಿನ್‌ನ ಅಗತ್ಯವಿರುವ ಮಹಿಳೆಯರು ರಸ್ತೆ ದಾಟಿ ಖರೀದಿ ಮಾಡುವ ಪರಿಸ್ಥಿತಿ ಇತ್ತು. ಹತ್ತಿರದ ಮಳಿಗೆಗಳಲ್ಲಿ ಸಿಕ್ಕರೂ ಖರೀದಿಸಲು ಮಹಿಳೆಯರು ಮುಜುಗರಪಡುತ್ತಿದ್ದರು. ಮಹಿಳೆಯರ ಸಂಕಷ್ಟವನ್ನು ಅರಿತು ಕೆಎಸ್‌ಆರ್‌ಟಿಸಿ ನಿರ್ದೇಶಕಿ ಕವಿತಾ ಎಸ್. ಮಣ್ಣಿಕೇರಿ, ನಿಲ್ದಾಣಗಳಲ್ಲೇ ನ್ಯಾಪ್‌ಕಿನ್ ಮೆಷಿನ್ ಅಳವಡಿಕೆ ಯೋಜನೆ ರೂಪಿಸಿದ್ದರು. ಹೆಚ್ಚಿನ ಮಹಿಳೆಯರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಭಿಪ್ರಾಯ ಸಂಗ್ರಹ

ನ್ಯಾಪ್‌ಕಿನ್ ಯಂತ್ರಗಳನ್ನು ಅಳವಡಿಸರುವುದು ನಿಮಗೆ ಅನುಕೂಲವಾಗಿದೆಯೇ? ಇದರಲ್ಲಿ ಬೇರೇನಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾ ಎಂಬುದರ ಬಗ್ಗೆ ಫೀಡ್ ಬ್ಯಾಕ್ ಪಡೆಯಲು ಲಾಂಗ್ ನೋಟ್ ಬುಕ್ ಕೂಡ ಇಡಲಾಗಿದೆ. ಪ್ರತಿದಿನ ನೂರಾರು ಮಂದಿ ನ್ಯಾಪ್‌ಕಿನ್ ಪಡೆದು ಇದರಲ್ಲಿ ಸಲಹೆಗಳನ್ನು ಬರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಲಹೆಗಳಲ್ಲಿ ಸೂಕ್ತವಾದವುಗಳನ್ನು ಬಳಸಲು ಕೂಡ ಸಂಸ್ಥೆ ನಿರ್ಧರಿಸಿದೆ.

ಎಲ್ಲೆಲ್ಲಿ ಅಳವಡಿಕೆ

ಮೆಜೆಸ್ಟಿಕ್ ಮಾತ್ರವಲ್ಲದೆ ಬೆಂಗಳೂರಿನ ಶಾಂತಿನಗರ ಡಿಪೊ, ಮೈಸೂರು ರಸ್ತೆಯ ಸ್ಯಾಟೆಲೈಟ್ ಬಸ್ ನಿಲ್ದಾಣ ಹಾಗೂ ದಾವಣಗೆರೆ, ಶಿವಮೊಗ್ಗ, ಮೈಸೂರು, ಮಂಗಳೂರು, ಹಾಸನದ ನಿಲ್ದಾಣಗಳನ್ನು ನ್ಯಾಪ್‌ಕಿನ್ ಯಂತ್ರ ಅಳವಡಿಕೆಗೆ ಗುರುತಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos