ಸಂಚಾರಿ ಪೋಲಿಸ್ ಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ!

ಸಂಚಾರಿ ಪೋಲಿಸ್ ಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ!

ಕೆ.ಆರ್.ಪುರ, ಜು. 10: ಸಂಚಾರಿ ಪೋಲಿಸರ ಬಹುದಿನಗಳ ಬೇಡಿಕೆಯಾಗಿದ್ದ ಸಂಚಾರಿ ಪೋಲಿಸ್ ಕಟ್ಟಡ ಆರು ತಿಂಗಳ ಹಿಂದೆ ಪೂರ್ಣಗೊಂಡರೂ ಇದುವರೆಗೆ ಹೊಸ ಕಟ್ಟಡದ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಕೆ.ಆರ್.ಪುರದ ಸಂಚಾರ ಪೋಲಿಸ್ ಠಾಣೆ ಪ್ರಸ್ತುತ ಮಾರುಕಟ್ಟೆ ಸಮೀಪದ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಚಾರಿ ಪೋಲಿಸ್ ಇಲಾಖೆ ಠಾಣೆ ತಾತ್ಕಾಲಿಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಸ್ವತ್ತಲ್ಲಿ ಕಾರ್ಯನಿರ್ವಹಿಸುತ್ತದೆ. ಹಳೆ ಕಟ್ಟಡದಲ್ಲಿ ನಿರ್ವಹಿಸುತ್ತಿರುವ ಸಂಚಾರಿ ಪೋಲಿಸ್ ಠಾಣೆ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಂತಿರುವ ರಸ್ತೆಯಲ್ಲಿರುವುದರಿಂದ ಸಾರ್ವಜನಿಕರಿಗೆ ಇದರಿಂದ ತೊಂದರೆ ಅನುಭವಿಸುವಂತಾಗಿತ್ತು.

ದೊಡ್ಡ ಗಾತ್ರದ ವಾಹನಗಳು ಠಾಣೆ ಪಕ್ಕದ ಈ ರಸ್ತೆಯಲ್ಲಿ ಸಂಚರಿಸುವಾಗ ತಪಾಸಣೆ ಮಾಡಲು ಪೋಲೀಸರು  ರಸ್ತೆಯೂದ್ದಕ್ಕೂ ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಗುತಿತ್ತು. ಇದನ್ನು ಮನಗಂಡು ಕಳೆದ ಒಂದೂವರೆ ವರ್ಷದ ಹಿಂದೆ ಕಾಂಗ್ರೆಸ್ ಸರ್ಕಾರದ ಗೃಹ ಸಚಿವ ಪರಮೇಶ್ವರ ಅವರು ಹಳೆ ಮದ್ರಾಸ್ ರಸ್ತೆಯ ಕೆ.ಆರ್.ಪುರ ಎಕ್ಸಂಟೇಷನ್ ಬಳಿ ಗುದ್ದಲಿ ಪೂಜೆ ನೆರವೇರಿಸಿದ್ದರು. ನೂತನ ಪೋಲಿಸ್ ಠಾಣೆ ಕಟ್ಟಡ ಆರು ತಿಂಗಳ ಹಿಂದೆ ಪೂರ್ಣಗೊಂಡಿದೆ.

ಕಟ್ಟಡ ನಿರ್ಮಾಣವಾದ ನಂತರ ಲೋಕಾರ್ಪಣೆ ದಿನಾಂಕ ನಿಗದಿಪಡಿಸಲಾಗಿತ್ತು. ಅದೆ ವೇಳೆ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ಲೋಕಾರ್ಪಣೆ ದಿನಾಂಕ ಮುಂದೂಡಲಾಯಿತು. ಈಗ ಲೋಕಸಭಾ ಚುನಾವಣೆ ಮುಗಿದು ತಿಂಗಳುಗಳು ಕಳೆದರೂ ಲೋಕಾರ್ಪಣೆ ಮರಿಚಿಕೆಯಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಹಳೆಯ ಸಂಚಾರ ಪೋಲಿಸ್ ಠಾಣೆ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡುವುದರಿಂದ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಆದಷ್ಟು ಬೇಗ ನೂತನ ಸಂಚಾರ ಪೋಲಿಸ್ ಠಾಣೆಯನ್ನು ಸ್ಥಳಾಂತರ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕ ಒತ್ತಾಸೆಯಾಗಿದೆ.

ಹಳೆ ಕಟ್ಟಡದಲ್ಲಿ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದೆ. ಠಾಣೆ ಪಕ್ಕದಲ್ಲಿ ತಪಾಸಣೆಗಾಗಿ ವಾಹನಗಳನ್ನು ನಿಲ್ಲಿಸುವಾಗ ಸ್ಥಳಾವಕಾಶ ಕೂಡ ಸಾಲುತ್ತಿಲ್ಲ ಅಧಿಕಾರಿಗಳು ಕಟ್ಟಡ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ  ಪೋಲಿಸ್ ಅಧಿಕಾರಿ ತಿಳಿಸಿದರು.

ಕೆ.ಆರ್.ಪುರದ ಹಳೆ ಮದ್ರಾಸ್ ರಸ್ತೆಯ ಎಕ್ಸಂಟೇಷನ್ ಬಳಿ ನೂತನವಾಗಿ ನಿರ್ಮಾಣವಾಗಿರುವ ಸುಸಜ್ಜಿತವಾದ ಸಂಚಾರಿ ಪೋಲಿಸ್ ಠಾಣೆ.

 

ಫ್ರೆಶ್ ನ್ಯೂಸ್

Latest Posts

Featured Videos