ಸಕ್ಕರೆ: ರೈತರಿಗೆ ಸಿಕ್ತು ಬಾಕಿ ಹಣ

ಸಕ್ಕರೆ: ರೈತರಿಗೆ ಸಿಕ್ತು ಬಾಕಿ ಹಣ

ಬೆಳಗಾವಿ, ಜು. 11 : ಜಿಲ್ಲಾಡಳಿತದ ಖಡಕ್ ಸೂಚನೆಗೆ ತಲೆ ಬಾಗಿರುವ ಜಿಲ್ಲೆಯ 19 ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಕೊಡಬೇಕಿದ್ದ ಬಾಕಿ ಹಣದಲ್ಲಿ ಶೇ. 100 ರಷ್ಟನ್ನು ಒಟ್ಟಿಗೇ ಪಾವತಿಸಿದ್ದಾರೆ.

ಇನ್ನುಳಿದ 6 ಸಕ್ಕರೆ ಕಾರ್ಖಾನೆಗಳ ಪೈಕಿ ಒಂದನ್ನು ಜಪ್ತಿ ಮಾಡಲಾಗಿದ್ದು, ಉಳಿದ ಐದು ಕಾರ್ಖಾನೆಗಳು ಶೇ. 90ರಷ್ಟು ಹಣವನ್ನು ಪಾವತಿಸಿವೆ. ಈ ಸಂಬಂಧ ಜಿಲ್ಲಾಡಳಿತವೇ ನೀಡಿದ ಅಧಿಕೃತ ಅಂಕಿ ಅಂಶಗಳು ಈಟಿವಿ ಭಾರತಕ್ಕೆ ಲಭ್ಯವಾಗಿವೆ.

ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಜಿಲ್ಲೆಯ 25 ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಬೆಳೆಗಾರರು ಕಬ್ಬು ಪೂರೈಸಿದ್ದರು. ಆದರೆ ಬಹಳಷ್ಟು ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಹಣ ನೀಡದೇ ಸತಾಯಿಸುತ್ತಿದ್ದವು. ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ, ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಸೇರಿದಂತೆ ರಾಜಕಾರಣಿಗಳ ಹಿಡಿತದಲ್ಲಿದ್ದ ಕಾರ್ಖಾನೆಗಳು ರೈತರಿಗೆ ಬಿಲ್ ಪಾವತಿಸಿರಲಿಲ್ಲ.

ಬಾಕಿ ಬಿಲ್ ಪಾವತಿಸದ ಕಾರ್ಖಾನೆ ಮಾಲೀಕರ ವಿರುದ್ಧ ಜಿಲ್ಲಾಡಳಿತ ಮುಟ್ಟುಗೋಲು ಹಾಕುವ ಎಚ್ಚರಿಕೆ ನೀಡಿ ನೋಟಿಸ್ ಕೊಟ್ಟಿತ್ತು. ಈ ನೋಟಿಸ್ನಿಂದ ಎಚ್ಚೆತ್ತುಕೊಂಡ ಬಾಕಿ ಉಳಿಸಿಕೊಂಡಿದ್ದ ಕಾರ್ಖಾನೆಗಳು ರೈತರಿಗೆ ಹಣ ಪಾವತಿಸಿವೆ.

ಅಥಣಿಯ ಉಗಾರ್ ಶುಗರ್ಸ್ 5.21 ಕೋಟಿ ರೂ, ಬೈಲಹೊಂಗಲದ ಸೋಮೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ 2.64 ಲಕ್ಷ ರೂ, ಕಾಂಗ್ರೆಸ್ ರೆಬಲ್ ನಾಯಕ ರಮೇಶ್ ಜಾರಕಿಹೊಳಿ ಹಿರೇನಂದಿಯ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ 1.22 ಲಕ್ಷ ರೂ, ಅಥಣಿಯ ಫಾರ್ಮರ್ಸ್ ಸಕ್ಕರೆ ಕಾರ್ಖಾನೆ 5.46 ಕೋಟಿ ರೂ, ಖಾನಾಪುರದ ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ 3.3 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಕಬ್ಬಿನ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆ ಮಾಲೀಕರು ತಕ್ಷಣವೇ ಹಣ ಪಾವತಿಸದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos