ಸಚಿವ ರೇವಣ್ಣ ವಿರುದ್ಧ 3,000 ಕೋಟಿ ಅಕ್ರಮ ಆರೋಪ…

ಸಚಿವ ರೇವಣ್ಣ ವಿರುದ್ಧ 3,000 ಕೋಟಿ ಅಕ್ರಮ ಆರೋಪ…

ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL)ದಲ್ಲಿ 3,163 ಕೋಟಿ ಮೊತ್ತದ ಬೃಹತ್ ಟೆಂಡರ್ ಅಕ್ರಮಗಳ ಹಗರಣ ನಡೆದಿದೆ. ಚುನಾವಣಾ ಖರ್ಚಿಗಾಗಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಕೋಟ್ಯಾಂತರ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್.ಆರ್ . ರಮೇಶ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017-18 ಹಾಗೂ 18-19 ನೇ ಸಾಲಿನಲ್ಲಿ ಕೆಆರ್ ಡಿಸಿಎಲ್​ನ 25 ಪ್ಯಾಕೇಜ್​ಗಳಲ್ಲಿ ಅಕ್ರಮ ನಡೆದಿದೆ. 2,552 ಕೋಟಿ ರೂ ಅಂದಾಜು ಮೊತ್ತದ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ 611 ಕೋಟಿ ರೂ ಸೇರಿಸಲಾಗಿದೆ. ಒಟ್ಟಾರೆ 3,163 ಕೋಟಿ ರೂಗೆ ಅನುಮೋದನೆ ನೀಡುವ ಮೂಲಕ ರೇವಣ್ಣ ಹಾಗೂ ಮಹದೇವಪ್ಪ ಅಕ್ರಮ ಎಸಗಿದ್ದಾರೆ ಎಂದರು. ಲೋಕೋಪಯೋಗಿ ಸಚಿವ ಹೆಚ್​.ಡಿ. ರೇವಣ್ಣ, ಲೋಕಸಭಾ ಚುನಾವಣೆಗೂ ಮುನ್ನ ಕೆಟಿಟಿಪಿ ಕಾಯ್ದೆಗೆ ವಿರುದ್ಧವಾಗಿ 1,449 ಕೋಟಿ ಮೊತ್ತದ ಟೆಂಡರ್​ಗಳಿಗೆ ಅನುಮೋದನೆ ನೀಡಿದ್ದಾರೆ. ಹಾಸನ ಮತ್ತು ತುಮಕೂರು ಲೋಕಸಭಾ ಚುನಾವಣೆಗಳಿಗೆ ಹಣ ಸಂಗ್ರಹಿಸಲು ಹೀಗೆ ಅಕ್ರಮವಾಗಿ ಟೆಂಡರ್​ಗೆ ಅನುಮೋದನೆ ನೀಡಿದ್ದಾರೆ ಎಂದರು.

10 ಪ್ಯಾಕೇಜ್​ಗಳ 1,449 ಕೋಟಿ ಮೊತ್ತದ ಅಕ್ರಮ ಟೆಂಡರ್​​ಗಳಿಗೆ ಅನುಮೋದನೆ ಕೊಡಿಸುವ ಮೂಲಕ ರೇವಣ್ಣ, ಗುತ್ತಿಗೆದಾರರಿಂದ 100 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದಿದ್ದಾರೆ. ಯಶಸ್ವಿ ಬಿಡ್​ದಾರರಾಗಿದ್ದ ಎನ್​​ಸಿಸಿ ಸಂಸ್ಥೆ, ರೇವಣ್ಣ ಕೇಳಿದಷ್ಟು ಕಮಿಷನ್ ಕೊಡದ ಕಾರಣ ಟೆಂಡರ್ ಪ್ರಕ್ರಿಯೆಯಿಂದ ಹಿಂದೆ ಸರಿಸಿದ್ದಾರೆ. ಅಧಿಕಾರಿ ಬಿ,ಎಸ್. ಶಿವಕುಮಾರ್ ಮುಖಾಂತರ ಈ ಕೆಲಸ ಮಾಡಿಸಿದ್ದಾರೆ. ಆನಂತರ ತಮಗೆ ಆಪ್ತವಾಗಿರುವ ಆಂಧ್ರ ಮೂಲದ ಎಸ್.ನಾಗಭೂಷಣಮ್ & ಕೋ. ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೆ ಹಿಂದಿನ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಸಿ . ಮಹದೇವಪ್ಪ, 2018ರ ವಿಧಾನಸಭಾ ಚುನಾವಣೆಗೆ ಹಣ ಸಂಗ್ರಹಿಸಲು ಆತುರಾತುರವಾಗಿ 1,714 ಕೋಟಿ ಮೊತ್ತದ 15 ಪ್ಯಾಕೇಜ್​ಗಳ ಕಾಮಗಾರಿಗಳಿಗೆ ಅಕ್ರಮವಾಗಿ ಅನುಮೋದನೆ ನೀಡಿದ್ದರು. ಆ ವೇಳೆ ಗುತ್ತಿಗೆದಾರರಿಂದ 250 ಕೋಟಿ ರೂಗೂ ಹೆಚ್ಚು ಮೊತ್ತವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದಿದ್ದಾರೆ ಎಂದು ಆರೋಪ ಮಾಡಿದರು. ಹೀಗಾಗಿ ಸಚಿವರು ಹಾಗೂ ಕೆಆರ್ ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಬಿಎಸ್ ಶಿವಕುಮಾರ್, ಕಾರ್ಯದರ್ಶಿ ಕೃಷ್ಣಾರೆಡ್ಡಿ, ಮುಖ್ಯಸ್ಥರಾಗಿದ್ದ ಗಣೇಶ, ಹಿರಿಯ ಐಎಎಸ್ ಅಧಿಕಾರಿಗಳಾದ ರಜನೀಶ್ ಗೋಯೆಲ್, ಏಕರೂಪ್ ಕೌರ್, ನವೀನ್ ರಾಜ್ ಸಿಂಗ್ ಮತ್ತು ಡಾ|| ಸಂದೀಪ್ ದಾವೆ ಸೇರಿದಂತೆ ಹತ್ತು ಅಧಿಕಾರಿಗಳ ವಿರುದ್ಧವೂ ಎಸಿಬಿಯಲ್ಲಿ ದೂರುಗಳು ದಾಖಲಿಸಲಾಗಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos