ಅತೃಪ್ತ ಶಾಸಕರು: ವಿಧಾನಸೌಧಕ್ಕೆ ಕರೆತರಲಿರುವ ಪೊಲೀಸರು

ಅತೃಪ್ತ ಶಾಸಕರು: ವಿಧಾನಸೌಧಕ್ಕೆ ಕರೆತರಲಿರುವ ಪೊಲೀಸರು

ಬೆಂಗಳೂರು, ಜು. 11 : ಇಂದು ಸಂಜೆಯೊಳಗೆ ಸ್ಪೀಕರ್ ಅವರನ್ನು ಖುದ್ದು ಭೇಟಿಯಾಗಿ ರಾಜೀನಾಮೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ಬೆನ್ನಲ್ಲೇ ಅತೃಪ್ತ ಶಾಸಕರು ರಾಜಧಾನಿಗೆ ಪ್ರಯಾಣ ಬೆಳಸಿದ್ದಾರೆ. ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಬರಲಿರುವ ಅವರಿಗೆ ಝಡ್ ಪ್ಲಸ್ ರಕ್ಷಣೆ ನೀಡಲು ಪೊಲೀಸರು ತೀರ್ಮಾನಿಸಿದ್ದಾರೆ.

ಬುಧವಾರ ಕಾಂಗ್ರೆಸ್ ಶಾಸಕ ಸುಧಾಕರ್, ಎಂಟಿಬಿ ನಾಗರಾಜ್ ರಾಜೀನಾಮೆ ಸಲ್ಲಿಕೆ ಬಳಿಕ ವಿಧಾನಸೌಧ ಕುಸ್ತಿ ಅಂಗಳವಾಗಿ ಮಾರ್ಪಟ್ಟಿತ್ತು. ಹೀಗಾಗಿ ಅತೃಪ್ತ ಶಾಸಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸುಪ್ರೀಂ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಜೆಡ್ ಪ್ಲಸ್ ಮಾದರಿಯ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಈಗಾಗಲೇ ಮುಂಬೈನಿಂದ ವಿಶೇಷ ವಿಮಾನದ ಆಗಮಿಸುತ್ತಿರುವ ಅತೃಪ್ತ ಶಾಸಕರು, ಇನ್ನೇನು ಕೆಲವೇ ಕ್ಷಣಗಳಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಆರು ಗಂಟೆಯೊಳಗೆ ಅವರು ಸ್ಪೀಕರ್ ಭೇಟಿ ಮಾಡಬೇಕಾಗಿರುವ ಹಿನ್ನೆಲೆ ಅತೃಪ್ತ ಶಾಸಕರಿಗಾಗಿ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.

ಅಲ್ಲದೇ, ಇವರನ್ನು ಕರೆತರುವ ಕುರಿತು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸ್ಪೀಕರ್ ಕಚೇರಿಗೂ ವಿಡಿಯೋ ಅಳವಡಿಸಲಾಗಿದ್ದು, ಅಲ್ಲಿಯೂ ಕೂಡ ಪ್ರತಿಯೊಂದು ಘಟನೆ ವಿಡಿಯೋದಲ್ಲಿ ದಾಖಲಾಗಿದೆ.

ಸ್ಪೀಕರ್ ಭೇಟಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸ್ಪೀಕರ್ ಭೇಟಿ ನಂತರ ಸುಪ್ರೀಂ ಕೋರ್ಟ್ ಸೂಚನೆಯಂತೆ ಶಾಸಕರು ಸೂಚಿಸಿದ ಸ್ಥಳಕ್ಕೆ ಸುರಕ್ಷಿತವಾಗಿ ಬಿಡುವುದು ಕೂಡ ಪೊಲೀಸರ ಜವಾಬ್ದಾರಿಯಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos