MI ವಿರುದ್ದ RR ಗೆ ಭರ್ಜರಿ ಜಯ

MI ವಿರುದ್ದ RR ಗೆ ಭರ್ಜರಿ ಜಯ

ಬೆಂಗಳೂರು: ನಿನ್ನೆ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 38ನೇ ಪಂದ್ಯದಲ್ಲಿ ಅತಿಥೇಯ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಜೋಡಿ ಉತ್ತಮ ಆರಂಭ ನೀಡಲಿಲ್ಲ. 1.3 ಓವರ್‌ಗಳಾಗುವಷ್ಟರಲ್ಲಿ ಇಬ್ಬರ ವಿಕೆಟ್‌ಗಳು ಉರುಳಿದವು. ರೋಹಿತ್ ಶರ್ಮಾ 6 ರನ್ ಗಳಿಸಿದರೆ, ಇಶಾನ್ ಕಿಶನ್ ಸೊನ್ನೆ ಸುತ್ತಿದರು.

ನಂತರ ಬಂದ ತಿಲಕ್ ವರ್ಮಾ 45 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 65 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಆ ಬಳಿಕ ತಿಲಕ್ ವರ್ಮಾ ಅವರಿಗೆ ಸಾಥ್ ನೀಡಿದ ನೇಹಾಲ್ ವಧೇರಾ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 49 ರನ್ ಗಳಿಸಿದರೆ, ಟಿಮ್ ಡೇವಿಡ್ 3 ರನ್ ಮಾತ್ರ ಗಳಿಸಿದರು. ತಿಲಕ್ ವರ್ಮಾ ಅವರ ಅಮೋಘ ಅರ್ಧಶತಕ ಮತ್ತು ನೇಹಾಲ್ ವಧೇರಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.

180 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಯಶಸ್ವಿ ಜೈಸ್ವಾಲ್ ಅವರ ಭರ್ಜರಿ ಶತಕದ ಸಹಾಯದಿಂದ 18.4 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 183 ರನ್ ಗಳಿಸುವ ಮೂಲಕ ಸುಲಭವಾಗಿ ಗೆಲುವು ಸಾಧಿಸಿತು. ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 8 ಓವರ್‌ಗಳಲ್ಲಿ 74 ರನ್‌ಗಳ ಜೊತೆಯಾಟ ನಿರ್ಮಿಸಿದರು. ಈ ವೇಳೆ 25 ಎಸೆತಗಳಲ್ಲಿ 6 ಬೌಂಡರಿ ಸಮೇತ 35 ರನ್ ಗಳಿಸಿದ್ದ ಜೋಸ್ ಬಟ್ಲರ್ ಔಟಾದರು.

ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ ಕೂಡ ಆಕ್ರಮಣಕಾರಿ ಆಟದ ಮೂಲಕ ತಮ್ಮ ತಂಡವನ್ನು ಗೆಲುವಿನ ಗಡಿ ತಲುಪಿಸಿದರು. ಯಶಸ್ವಿ ಜೈಸ್ವಾಲ್ ಜೊತೆಗೂಡಿ ಮುರಿಯದ 2ನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟ ರಚಿಸಿದರು. ಸಂಜು ಸ್ಯಾಮ್ಸನ್ 28 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಜೇಯ 38 ರನ್ ಗಳಿಸಿದರು.

ಇನ್ನು ಆರಂಭಿಕ ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ತಮ್ಮ ಎರಡನೇ ಶತಕ ಸಿಡಿಸಿದರು. ಗಮನಾರ್ಹವಾಗಿ, ಆ ಎರಡು ಶತಕಗಳು ಮುಂಬೈ ಇಂಡಿಯನ್ಸ್ ವಿರುದ್ಧವೇ ಬಂದಿವೆ. 60 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 104 ರನ್ ಬಾರಿಸಿ ಗೆಲುವಿನ ಬೌಂಡರಿ ಹೊಡೆದರು.

 

 

ಫ್ರೆಶ್ ನ್ಯೂಸ್

Latest Posts

Featured Videos