ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ 41ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ಓಟಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ರೇಕ್ ಆಗಿದೆ.
ಆರ್‌ಸಿಬಿ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಹೈದರಾಬಾದ್ ಬ್ಯಾಟರ್ಸ್ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್‌ಗಳನ್ನು ಗಳಿಸಿತು. ಹೀಗಾಗಿ ಹೈದರಾಬಾದ್ ಎದುರು ಆರ್‌ಸಿಬಿ 35 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಆರ್‌ಸಿಬಿ ನೀಡಿದ 207 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಹೈದರಬಾದ್‌ಗೆ ಆರಂಭದಲ್ಲೆ ಸ್ಪೋಟಕ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಳ್ಳಬೇಕಾಯಿತು. ಆರ್‌ಸಿಬಿ ಪರ ವಿಲ್ ಜ್ಯಾಕ್, ಟ್ರಾವಿಸ್ ಹೆಡ್ ವಿಕೆಟ್ ಪಡೆಯುವ ಮೂಲಕ ಹೈದರಾಬಾದ್‌ಗೆ ಶಾಕ್ ನೀಡಿದರು. ಬಳಿಕ ಬಂದ ಐಡನ್ ಮಾರ್ಕ್ರಾಮ್ ಜೊತೆಗೂಡಿ ಆರಂಭಿಕ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅಬ್ಬರದ ಆಟವಾಡಿದರು. 13 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗು ಮೂರು ಬೌಂಡರಿ ಮೂಲಕ 31 ರನ್‌ಗಳನ್ನು ಗಳಿಸಿ ಅಭಿಷೇಕ್ ವಿಕೆಟ್ ಕಳೆದುಕೊಂಡರು. ಐಡನ್ ಮಾರ್ಕ್ರಾಮ್ ಕೂಡ ಎಂದಿನಂತೆ ಹೈದರಬಾದ್ ಕೈ ಹಿಡಿಯಲಿಲ್ಲ.
ಈ ಮೂಲಕ ಹೈದರಾಬಾದ್ 85 ಗಳಿಸುವಷ್ಟರಲ್ಲೆ ಪ್ರಮುಖ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್‌ಗೆ ಬಂದ ನಾಯಕ ಪ್ಯಾಟ್ ಕಮಿನ್ಸ್ ಆರ್‌ಸಿಬಿ ಬೌಲರ್ಸ್ ಅನ್ನು ತರಾಟೆಗೆ ತೆಗೆದುಕೊಂಡರು. ಮೂರು ಸಿಕ್ಸರ್ ಸಿಡಿಸುವ ಮೂಲಕ 31 ರನ್‌ಗಳಿಸಿ ಅಪಕಾರಿಯಾಗಿ ಕಾಣುತ್ತಿದ್ದ ಪ್ಯಾಟ್ ಕಮಿನ್ಸ್ ಅನ್ನು ಕ್ಯಾಮೆರಾನ್ ಗ್ರೀನ್ ಔಟ್ ಮಾಡಿದರು.
ಆದರೆ ಕ್ರೀಸ್‌ಗೆ ಗಟ್ಟಿಯಾಗಿ ಕಚ್ಚಿ ನಿಂತ ಶಹಬಾಜ್ ಅಹ್ಮದ್ ತಾಳ್ಮೆ ಆಟವಾಡಿದರು. ಕೊನೆಯಲ್ಲಿ ಭುವನೇಶ್ವರ್ ಕುಮಾರ್ ಮೂರು ಬೌಂಡರಿ ಬಾರಿಸಿ 13 ರನ್‌ಗಳಿಗೆ ಔಟ್ ಆದರೆ, ಶಹಬಾಜ್ ಅಹ್ಮದ್ (40) ಹಾಗು ಜಯದೇವ್ ಉನದ್ಕತ್ (8) ವಿಕೆಟ್ ಉಳಿಸಿಕೊಂಡರು. ಆದರೆ ಆರ್‌ಸಿಬಿ ಎದುರು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.