ರೌಡಿಶೀಟರ್ ಅಮೀರ ಖಾನ ಬಂಧನ

ರೌಡಿಶೀಟರ್ ಅಮೀರ ಖಾನ ಬಂಧನ

ಬೆಂಗಳೂರು, ಜು. 24 : ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಶೀಟರ್​ನನ್ನು ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ. ಕುಖ್ಯಾತ ರೌಡಿ ಕೋಳಿ ಫಯಾಜ್ ಪುತ್ರ ಶಿವಾಜಿನಗರದ ನಿವಾಸಿ ಅಮೀರ್ ಖಾನ್ ಅಲಿಯಾಸ್ ಪಪು್ಪ (34) ಗುಂಡೇಟು ತಿಂದ ರೌಡಿ. ದರೋಡೆ, ಸುಲಿಗೆ, ಕೊಲೆಯತ್ನ, ಹಲ್ಲೆ ಸೇರಿ ಅಮೀರ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 22ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. 2 ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ. ಶಿವಾಜಿನಗರ ಪೊಲೀಸರು ಈತನ ವಿರುದ್ಧ ರೌಡಿಪಟ್ಟಿ ತೆರೆದಿದ್ದರು. ನ್ಯಾಯಾಲಯದ ವಾರಂಟ್ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ಅಮೀರ್ ತಲೆಮರೆಸಿಕೊಂಡಿದ್ದ. ಅಲ್ಲದೆ, ರಾತ್ರಿ ಹೊತ್ತು ಕೊತ್ತನೂರು ಸೇರಿ ನಗರದ ವಿವಿಧ ಭಾಗಗಳಲ್ಲಿ ಒಂಟಿಯಾಗಿ ಓಡಾಡುವವರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ. ಈ ವಿಚಾರ ಸಿಸಿಬಿ ಪೊಲೀಸರ ಗಮನಕ್ಕೆ ಬಂದಿತ್ತು.

ಭಾನುವಾರ (ಜೂ.23) ಮಧ್ಯಾಹ್ನ ಅಮೀರ್ ಕೊತ್ತನೂರಿನ ದೊಡ್ಡಗುಬ್ಬಿ ಬಳಿ ಬೈಕ್​ನಲ್ಲಿ ಹೋಗುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ವಿಭಾಗದ ಇನ್​ಸ್ಪೆಕ್ಟರ್ ಲಕ್ಷ್ಮೀಕಾಂತ್ ನೇತೃತ್ವದ ತಂಡ ದೊಡ್ಡಗುಬ್ಬಿ ಬಳಿ ಅಮೀರ್​ನ್ನು ಪತ್ತೆಹಚ್ಚಿತ್ತು.

ಸ್ಮಶಾನದೊಳಗೆ ಬೈಕ್

ತನ್ನನ್ನು ಬಂಧಿಸಲು ಪೊಲೀಸರು ಬಂದಿರುವುದನ್ನು ಅರಿತ ರೌಡಿ ಅಮೀರ್ ಬೈಕ್​ನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಹೊಯ್ಸಳ ವಾಹನದಲ್ಲಿ ಬೈಕ್ ಬೆನ್ನಟ್ಟಿದ್ದ ಪೊಲೀಸರು ಆತನಿಗೆ ನಿಲ್ಲುವಂತೆ ಸೂಚಿಸಿದ್ದರು. ಆದರೆ, ಆತ ಪೊಲಿಸರ ಮಾತಿಗೆ ಕಿವಿಗೊಡದೆ ದೊಡ್ಡಗುಬ್ಬಿ ಸ್ಮಶಾನದೊಳಗೆ ಬೈಕ್ ನುಗ್ಗಿಸಿದ್ದ. ಪೊಲೀಸರು ಸ್ಮಶಾನದೊಳಗೆ ಹೋಗಿ ಆತನನ್ನು ಅಡ್ಡಗಟ್ಟಿದ್ದು, ಪೇದೆ ಉಮೇಶ್ ಬಂಧಿಸಲು ಹೋದಾಗ ಅಮೀರ್ ತನ್ನ ಬಳಿಯಿದ್ದ ಡಾ್ಯಗರ್​ನಿಂದ

ಕೈಗೆ ಇರಿದು ಗಾಯಗೊಳಿಸಿದ್ದ. ಇದನ್ನು ಗಮನಿಸಿದ ಇನ್​ಸ್ಪೆಕ್ಟರ್ ಲಕ್ಷ್ಮೀಕಾಂತ್ ಪಿಸ್ತೂಲ್​ನಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದು ಕುಸಿದು ಬಿದ್ದ ಅಮೀರ್​ನ್ನು ಸಿಸಿಬಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos