ನಾಳೆ ಲೋಕ ಸಮರದ ಫಲಿತಾಂಶ : ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ

ನಾಳೆ ಲೋಕ ಸಮರದ ಫಲಿತಾಂಶ : ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ

ಬೆಂಗಳೂರು, ಮೇ.22, ನ್ಯೂಸ್‍ ಎಕ್ಸ್ ಪ್ರೆಸ್‍:  17ನೇ ಲೋಕಸಭೆ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 6 ಗಂಟೆಯ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಜತೆಗೆ ನಡೆದಿರುವ ಎರಡು ವಿಧಾನಸಭಾ ಕ್ಷೇತ್ರಗಳು ಹಾಗೂ  ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಯ ಫಲಿತಾಂಶ ಕೂಡ ನಾಳೆ ಹೊರಬೀಳಲಿದೆ.

ಬೆಳಿಗ್ಗೆ 8 ಗಂಟೆಗೆ ಸ್ಟ್ರಾಂಗ್ರೂಂ ಓಪನ್

ರಾಜ್ಯದಲ್ಲಿ ಒಟ್ಟು 18ರಿಂದ 33 ಸುತ್ತುಗಳ ಮತ ಎಣಿಕೆ ನಡೆಯುತ್ತದೆ. ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರದಂತಹ ದೊಡ್ಡ ಕ್ಷೇತ್ರಗಳಲ್ಲಿ 33 ಸುತ್ತುಗಳ ಮತ ಎಣಿಕೆ ನಡೆಯುತ್ತದೆ. ಒಂದು ಸುತ್ತಿನ ಮತ ಎಣಿಕೆಗೆ ಸುಮಾರು 45 ನಿಮಿಷಗಳು ಬೇಕಾಗುತ್ತದೆ. ಆಯಾ ಕ್ಷೇತ್ರಗಳ ಇವಿಎಂಗಳನ್ನು ಜಿಲ್ಲಾ ಕೇಂದ್ರದಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ನಾಳೆ ಬೆಳಗ್ಗೆ ಸರಿಯಾಗಿ ಎಂಟು ಗಂಟೆಗೆ ಜಿಲ್ಲಾ ಚುನಾವಣಾಧಿಕಾರಿ, ಬೂತ್​ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್​ ರೂಂ ಬಾಗಿಲು ತೆರೆಯಲಾಗುತ್ತದೆ.

ಕೌಂಟಿಂಗ್ ಬೂತ್‍ ಸುತ್ತಮುತ್ತ ನಿಷೇಧಾಜ್ಞೆ..!

ಆಯಾ ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್​ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಅಧಿಕೃತ ಸಿಬ್ಬಂದಿ, ಬೂತ್​ ಏಜೆಂಟ್​ಗಳು ಹಾಗೂ​ ನೋಂದಾಯಿತ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಎಣಿಕೆ ಕೇಂದ್ರದ ಒಳಗೆ ಪ್ರವೇಶ ಕಲ್ಪಿಸಲಾಗಿದೆ. ಎಣಿಕೆ ಕೇಂದ್ರದಿಂದ ನೂರು ಮೀಟರ್​ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಆ ಪ್ರದೇಶದಲ್ಲಿ ಯಾರೂ ಅನಧಿಕೃತವಾಗಿ ಓಡಾಡುವಂತಿಲ್ಲ ಹಾಗೂ ಸಂಭ್ರಮಾಚರಣೆ ಮಾಡುವಂತಿಲ್ಲ. ಕೆಲವು ಕ್ಷೇತ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪಟಾಕಿ ಸಿಡಿಸುವುದು ಹಾಗೂ ಗೆಲುವಿನ ಮೆರವಣಿಗೆಗೆ ಅವಕಾಶ ನಿರಾಕರಿಸಿ, ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.

ಸಂಜೆ 6 ಗಂಟೆ ವೇಳೆಗೆ ನಿಖರ ಫಲಿತಾಂಶ
ಸುಪ್ರೀಂಕೋರ್ಟ್​ ಸೂಚನೆಯ ಮೇರೆಗೆ ಈ ಬಾರಿ ಪ್ರತಿ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಐದರಂತೆ 40 ಮತಗಟ್ಟೆಗಳ ವಿವಿಪ್ಯಾಟ್​ ಚೀಟಿಗಳನ್ನು ಎಣಿಕೆ ಮಾಡಿ ಇವಿಎಂ ಫಲಿತಾಂಶದ ಜತೆ ತಾಳೆ ಮಾಡಲಾಗುತ್ತದೆ. ಹೀಗಾಗಿ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಸಂಜೆ 6 ಗಂಟೆಯ ವೇಳೆಗೆ ಬಹುತೇಕ ಕ್ಷೇತ್ರಗಳ ಫಲಿತಾಂಶ ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ. ಒಂದು ವೇಳೆ ಕಂಟ್ರೋಲ್​ ಯೂನಿಟ್​ನಲ್ಲಿ ಮತಗಳು ಕಾಣಿಸದೇ ಇದ್ದರೆ, ಅದನ್ನು ಪ್ರತ್ಯೇಕವಾಗಿ ಇಟ್ಟು, ಕೊನೆಯಲ್ಲಿ ಮತ ಖಾತರಿ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ. ಮಾನವ ಲೋಪದಿಂದ ಸಮಸ್ಯೆ ಉಂಟಾದರೂ ಮತ ಖಾತರಿ ಚೀಟಿಯನ್ನು ಎಣಿಕೆ ಮಾಡಲಾಗುವುದು.

 

ಫ್ರೆಶ್ ನ್ಯೂಸ್

Latest Posts

Featured Videos