ರೇಷ್ಮೆ ನೂಲಿನಲ್ಲಿ ಬಂಧಿಯಾದ ಬಡಜನರ ಬದುಕು..!

ರೇಷ್ಮೆ ನೂಲಿನಲ್ಲಿ ಬಂಧಿಯಾದ ಬಡಜನರ ಬದುಕು..!

ರಾಮನಗರ, ಮೇ.30, ನ್ಯೂಸ್ ಎಕ್ಸ್ ಪ್ರೆಸ್:  ನೈಪುಣ್ಯತೆಯಿಂದ ರೇಷ್ಮೆ ಹುಳ ಸೃಷ್ಟಿಸಿದ ಗೂಡನ್ನು ಕೈಸುಡುವ ಹಬೆ ನೀರಲ್ಲಿ ಎಳೆ ಎಳೆ ನೂಲು ಬಿಚ್ಚುವುದನ್ನೇ ಬದುಕಾಗಿಸಿಕೊಂಡಿರುವ ಬದುಕು ಈಗ ಬೀದಿಗೆ ಬರುವಂತಾಗಿದೆ. ನಗರದ ಸರಕಾರಿ ರೇಷ್ಮೆ ಮಾರುಕಟ್ಟೆಗೆ ಆವಕ ದಿನೇ ದಿನೆ ಕಡಿಮೆಯಾಗುತ್ತಿರುವ ನಡುವೆಯೇ ನಗರದಲ್ಲಿ ಅಲ್ಲಲ್ಲಿ ಎಂದರೂ ಸುಮಾರು 50 ರೀಲರ್‌ಗಳು ಅನೇಕ ಕಷ್ಟಗಳಿಂದ ಗೂಡಿನಿಂದ ಹೊರಬರಲಾಗದೆ ವಿಹ್ವಲಗೊಳ್ಳುವ ರೇಷ್ಮೆ ಹುಳುವಿನಂತಾಗಿದ್ದಾರೆ.

ಇವತ್ತು ಬಿಚ್ಚಣಿಕೆದಾರರು ಹಣದ ಕೊರತೆಯಿಂದ ಕಸುಬು ನಡೆಸಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಷ್ಟದ ನಡುವೆ ಕಸಬು ಬಿಡದೆ ಬರುತ್ತಿರುವವರಿಗೆ ರೇಷ್ಮೆ ಇಲಾಖೆ ಕಿಂಚಿತ್ತು ಸಹಾಯಹಸ್ತ ಚಾಚಿಲ್ಲ. ನೂಲು ಬಿಚ್ಚುವ ಕಾರ್ಮಿಕ ವರ್ಗದ ಮೇಲೆ ಕೂಡಾ ಇದರ ಪರಿಣಾಮ ಬಿದ್ದಿದೆ. ಇದರಿಂದ ರೀಲರ್‌ಗಳು ತಮ್ಮ ಕಸಬು ನಿಲ್ಲಿಸಿ ಬಿಡುವ ಮಟ್ಟಿಗೆ ರೋಸಿ ಹೋಗಿದ್ದಾರೆ.

ನಗರದ ರೇಷ್ಮೆ ಮಾರುಕಟ್ಟೆಗೆ ದಿನಕ್ಕೆ 14ರಿಂದ 20 ಲಾಟು ಬರುತ್ತಿದೆ. ಬಹುತೇಕ ರೀಲರ್‌ಗಳಲ್ಲಿ ಕೆಲವೇ ಮಂದಿಗೆ ಗೂಡು ಸಿಗುತ್ತಿದೆ. ಉಳಿದವರು ರಾಮನಗರ, ತುಮಕೂರು, ಶಿಡ್ಲಘಟ್ಟ, ಬೆಂಗಳೂರು ಗ್ರಾಮಾಂತರ ಭಾಗದ ವಿಜಯಪುರಕ್ಕೆ ಸೇರಿದಂತೆ ಅನೇಕ ಕಡೆಗಳಿಗೆ ಗೂಡು ತರಲು ತೆರಳಬೇಕಾಗಿದೆ. ಇದಕ್ಕೆಲ್ಲ ಸಾಗಾಟದ ಖರ್ಚು ಕೂಡ ರೀಲರ್‌ಗಳಿಗೆ ದುಂದು ವೆಚ್ಚವಾಗುತ್ತಿದೆ.  ರೇಷ್ಮೆ ನೂಲು ಬಿಚ್ಚುವ ಕಸುಬನ್ನು ನಡೆಸಿಕೊಂಡು ಬರುತ್ತಿರುವ ರೀಲರ್‌ಗಳು ಇನ್ನೂ ಹಳೆಯ ಕಾಲದ ಯಂತ್ರಗಳ ಬಳಕೆ ಮಾಡುತ್ತಿದ್ದಾರೆ. ಇದರಿಂದ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ರೇಷ್ಮೆ ಇಲಾಖೆ ಬಿಚ್ಚಣಿಕೆದಾರರಿಗೆ ಕನಿಷ್ಠ ಸರಕಾರದಿಂದ ವಿದ್ಯುತ್‌ಚಾಲಿತ ಯಂತ್ರಗಳನ್ನು ಕೊಡಿಸುವ ಕೆಲಸ ಮಾಡಿಲ್ಲ ಎಂಬುದು ರೀಲರ್‌ಗಳ ಆರೋಪವಾಗಿದೆ.

ನೂಲು ತೆಗೆಯಲು ವಿದ್ಯುನ್ಮಾನ ರಾಟೆಗಳನ್ನು ಬಳಸಲು ಸುಮಾರು 5 ಲಕ್ಷ ಹಣ ಖರ್ಚಾಗುತ್ತದೆ. ಇಷ್ಟೊಂದು ಹಣ ನಮ್ಮ ಬಳಿ ಇಲ್ಲ. ಯಂತ್ರಗಳನ್ನು ಕೊಳ್ಳಲು ಬ್ಯಾಂಕ್‌ಗಳಲ್ಲಿ ಸಾಲ ಕೇಳಿದರೆ ನೀಡಲ್ಲ. ಕಾರ್ಮಿಕರು ಕೆಲಸ ಮಾಡಲು ಒಬ್ಬರಿಗೆ ಕನಿಷ್ಟ 50 ಸಾವಿರ ಮುಂಗಡ ಹಣ ಪಾವತಿಸಬೇಕು. ಇಷ್ಟೆಲ್ಲ ಕಷ್ಟಗಳಿದ್ದರೂ ರೇಷ್ಮೆ ಇಲಾಖೆ ಸ್ಪಂದಿಸುತ್ತಿಲ್ಲ ಎಂಬುದು ರೀಲರ್‌ಗಳ ಅಳಲು.

ರೀಲರ್‌ಗಳಿಗೆ ಸರಕಾರದಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿ ಇ-ಹರಾಜು ವ್ಯವಸ್ಥೆ ಜಾರಿಗೆ ತರಲಾಗಿದ್ದು, ಇದು ರೈತರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ರೇಷ್ಮೆ ಇಲಾಖೆ ಅಧಿಕಾರಿಗಳು ಒಮ್ಮೆಯೂ ಮಾರುಕಟ್ಟೆಗೆ ಭೇಟಿ ನೀಡಿ ರೀಲರ್‌ಗಳ ಸಮಸ್ಯೆ ಆಲಿಸಿಲ್ಲ. ಬರೀ ಇಲಾಖೆಯ ಕೊಠಡಿಗೆ ಸೀಮಿತರಾಗಿದ್ದಾರೆ.

ನನಗೆ ನೂಲು ತೆಗೆಯುವುದು ಬಿಟ್ಟರೆ ಮತ್ತ್ಯಾವ ಕೆಲಸವೂ ಬರುವುದಿಲ್ಲ. ಇದೀಗ ಈ ಕೆಲಸ ನಿಂತರೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ರಾಜ್ಯ, ಕೇಂದ್ರ ಸರಕಾರ ಎಲ್ಲ ವರ್ಗದ ಕುಲಕಸಬಿಗೆ ಒಂದೊಂದು ಯೋಜನೆ ನೀಡಿದೆ. ಆದರೆ ನಮ್ಮ ಕಸಬನ್ನು ಕಡೆಗಣಿಸಿದೆ. ರೇಷ್ಮೆ ಇಲಾಖೆ ಅಧಿಕಾರಿಗಳು ನಮ್ಮನ್ನು ಮರೆತಿದ್ದಾರೆ. ಜಿಲ್ಲಾಡಳಿತವಾದರೂ ಬಿಚ್ಚಣಿಕೆದಾರರನ್ನು ಪ್ರೋತ್ಸಾಹಿಸಲಿ. ಎನ್ನುತ್ತಾರೆ ಎಂ.ಮಹಬೂಬ್‌ ಪಾಷಾ

ಸ್ಥಳೀಯ ರೀಲರ್‌ಗಳು ಬೆಂಗಳೂರಿನ ನಂಬಿಕಸ್ಥ ವ್ಯಕ್ತಿಗಳಿಗೆ ನೂಲು ಮಾರಾಟ ಮಾಡುತ್ತೇವೆ. ಮಾರಿದ ನೂಲಿಗೆ ಯಾವುದೇ ದಾಖಲೆ ನೀಡುವುದಿಲ್ಲ. ಜತೆಗೆ ಮಾರಾಟ ಮಾಡಿದ ನೂಲಿಗೆ ಒಂದು ತಿಂಗಳ ಬಳಿಕ ಹಣ ಕೈ ಸೇರುತ್ತದೆ. ನಿತ್ಯ ಕೆಲಸಕ್ಕೆ ಒಂದು ಲಾಟು ಗೂಡು ಖರೀದಿಸಲು 50ರಿಂದ 60 ಸಾವಿರ ಗೂಡು ಬೇಕಾಗುತ್ತದೆ. ಇಷ್ಟೊಂದು ಹಣವನ್ನು ಬಡ್ಡಿಗೆ ಪಡೆದು ರೇಷ್ಮೆ ಗೂಡು ಖರೀದಿಸಿ ಕಸಬು ನಡೆಸುತ್ತಿದ್ದೇವೆ ಎಂಬುದು ರೀಲರ್‌ಗಳ ಬೇಸರದ ನುಡಿ.

ರೇಷ್ಮೆಗೂಡಿನ ಎಳೆ ಎಳೆ ನೂಲು ತೆಗೆಯಲು ಸುಡುವ ಅಬೆ ನೀರಲ್ಲಿ ಕೈ ಹಾಕುವುದರಿಂದ ಕೈ ಸುಟ್ಟು ಚರ್ಮದ ಕಾಯಿಲೆ ಒಳಗಾಗುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಬೊಗೆಯಿಂದ ಹೊರಬರುವ ಅಬೆಯು ಎದೆ ಉರಿ, ತಲೆ ಸುತ್ತುವಿಕೆ ಇನ್ನಿತರ ಕಾಯಿಲೆಗಳು ಬಿಚ್ಚಣಿಕೆದಾರರನ್ನು ಕಾಡುತ್ತಿದೆ. ಇಷ್ಟಾದರೂ ರೇಷ್ಮೆ ಇಲಾಖೆ, ಆರೋಗ್ಯ ಅಧಿಕಾರಿಗಳಾಗಲಿ, ಜಿಲ್ಲಾಡಳಿತ ಈವರೆಗೆ ತಲೆಕೆಡಸಿಕೊಂಡಿಲ್ಲ ಎಂದು ಹೇಳುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos