ಬೆಂಗಳೂರು: ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನಡುವೆ ಐಪಿಎಲ್ 2024ರ 10ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಮೊದಲ ಪಂದ್ಯದಲ್ಲಿ ಸೋಲುಂಡ ಬಳಿಕ ಪಂಜಾಬ್ ವಿರುದ್ಧ ಗೆದ್ದಿರುವ ಆರ್ಸಿಬಿ ತವರಿನಲ್ಲಿ ಮತ್ತೊಂದು ಜಯ ಸಾಧಿಸುವ ಹಂಬಲದಲ್ಲಿದೆ.
ಇನ್ನೊಂದೆಡೆ KKR ಐಪಿಎಲ್ 2024 ರ ತನ್ನ ಮೊದಲ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ಗೆದ್ದಿದೆ. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಅಭಿಮಾನಿಗಳ ಕಣ್ಣು ವಿರಾಟ್ ಕೊಹ್ಲಿ ಹಾಗೂ ಆಂಡ್ರೆ ರಸೆಲ್ ಮೇಲಿದ್ದು, ಈ ಇಬ್ಬರೂ ಆಟಗಾರರು ತಮ್ಮ ತಂಡಗಳಿಗೆ ಎಕ್ಸ್ ಫ್ಯಾಕ್ಟರ್ ಆಗಿ ಆಟವಾಡೋದರಲ್ಲಿ ಸಂಶಯವಿಲ್ಲ.
ಆರ್ಸಿಬಿ ಋತುವಿನ ತಮ್ಮ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ಆದರೆ ಪಂಜಾಬ್ ಕಿಂಗ್ಸ್ ಅನ್ನು ತನ್ನ ಎರಡನೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪುಟಿದೆದ್ದಿತು. ಇದೀಗ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ ಫಾಫ್ ಡುಪ್ಲೆಸಿಸ್ ಪಡೆ.
ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಹಲವು ವರ್ಷಗಳಿಂದ ಬ್ಯಾಟಿಂಗ್ ಸ್ನೇಹಿಯಾಗಿದೆ. ಐಪಿಎಲ್‌ನಲ್ಲಿ ಬ್ಯಾಟಿಂಗ್ ಸ್ವರ್ಗವಾಗಿ ಪರಿಣಮಿಸಿದೆ. ಹೀಗಾಗಿ ತಂಡಗಳು ಈ ಸ್ಥಳದಲ್ಲಿ ಚೇಸ್ ಮಾಡಲು ಆಯ್ಕೆ ಮಾಡಿಕೊಳ್ಳುತ್ತವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗಿಂತ ಚೇಸಿಂಗ್ ತಂಡಗಳು ಈ ಸ್ಥಳದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿವೆ.