ಮೊಟ್ಟ ಮೊದಲ ಬಾರಿಗೆ ಫೈನಲ್ಗೇರಿದ ಆರ್ಸಿಬಿ..!

ಮೊಟ್ಟ ಮೊದಲ ಬಾರಿಗೆ ಫೈನಲ್ಗೇರಿದ ಆರ್ಸಿಬಿ..!

ಬೆಂಗಳೂರು: ಪುರುಷರಿಗೆ ಸಿಗದಿರುವ ಟ್ರೋಫಿಯನ್ನು ತಾವು ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿರುವ ಆರ್‌ಸಿಬಿ ಮಹಿಳಾ ತಂಡ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಮಹಿಳಾ ಐಪಿಎಲ್‌ನಲ್ಲಾದರೂ ಆರ್‌ಸಿಬಿಯ ಟ್ರೋಫಿ ಗೆಲ್ಲುವ ಕನಸು ಸಾಕಾರಗೊಳ್ಳುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿತ್ತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು 5 ರನ್ಗಳಿಂದ ಮಣಿಸಿದ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್ಗೇರಿದೆ. ಟೂರ್ನಿಯ ಎರಡನೇ ಸೀಸನ್‌ನ ಅಂತಿಮ ಪಂದ್ಯ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.

ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಡೆಲ್ಲಿ ತಂಡ ಈಗಾಗಲೇ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ. ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿಗೆ ಅತ್ಯಂತ ಕಳಪೆ ಆರಂಭ ಸಿಕ್ಕಿತು. ಮಂಧಾನ ಔಟಾದ ನಂತರ ಬಂದ ದಿಶಾ ಕ್ಯಾಸಟ್ ಖಾತೆ ತೆರೆಯಲು ಸಾಧ್ಯವಾಗದೆ ಪೆವಿಲಿಯನ್ ಸೇರಿಕೊಂಡರು ಈ ವೇಳೆಗೆ ಬೆಂಗಳೂರಿನ ಸ್ಕೋರ್ 23 ರನ್‌ಗಳಿಗೆ 4 ವಿಕೆಟ್ ಆಗಿತ್ತು.

ಇದಾದ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಚಾ ಘೋಷ್ ಕೂಡ ಹೇಯ್ಲಿ ಮ್ಯಾಥ್ಯೂಸ್ ಎಸೆತದಲ್ಲಿ 19 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ರಿಚಾ ಔಟಾದ ನಂತರ, ಆರ್‌ಸಿಬಿ ನಿಯಮಿತ ಅಂತರದಲ್ಲಿ ತನ್ನ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಆದರೆ ಒಂದು ತುದಿಯಲ್ಲಿ ಸಮಯೋಜಿತ ಬ್ಯಾಟಿಂಗ್ ನಡೆಸಿದ ಎಲಿಸ್ ಪೆರ್ರಿ 50 ಎಸೆತಗಳಲ್ಲಿ 66 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ಬೆಂಗಳೂರು ತಂಡ 20 ಓವರ್‌ಗಳಲ್ಲಿ 135 ರನ್ ಗಳಿಸಲಷ್ಟೇ ಶಕ್ತವಾಯಿತು.
20 ಓವರ್‌ಗಳಲ್ಲಿ 136 ರನ್‌ಗಳನ್ನು ಬೆನ್ನಟ್ಟಿದ ಹರ್ಮನ್‌ಪ್ರೀತ್ ಸಾರಥ್ಯದ ಮುಂಬೈ ಇಂಡಿಯನ್ಸ್‌ಗೆ ವಿಶೇಷ ಆರಂಭ ಸಿಗಲಿಲ್ಲ. 27 ರನ್‌ಗಳಾಗುವಷ್ಟರಲ್ಲಿ ತಂಡವು ಇನ್‌ಫಾರ್ಮ್ ಬ್ಯಾಟರ್ ಹೇಲಿ ಮ್ಯಾಥ್ಯೂಸ್ ಅವರ ಪ್ರಮುಖ ವಿಕೆಟ್ ಅನ್ನು ಕಳೆದುಕೊಂಡಿತು. ಹೇಲಿ ಮ್ಯಾಥ್ಯೂಸ್ 14 ಎಸೆತಗಳಲ್ಲಿ 15 ರನ್‌ಗಳ ಇನಿಂಗ್ಸ್‌ ಆಡಿದರು. ಇದರ ನಂತರ ಸ್ಕೋರ್ 50 ರ ಸಮೀಪದಲ್ಲಿದ್ದಾಗ ಎರಡನೇ ಆರಂಭಿಕ ಬ್ಯಾಟರ್ ಯಾಸ್ತಿಕಾ ಭಾಟಿಯಾ ಕೂಡ ಯಾವುದೇ ದೊಡ್ಡ ಇನ್ನಿಂಗ್ಸ್ ಆಡದೆ ಪೆವಿಲಿಯನ್ ಸೇರಿಕೊಂಡರು.

ನಾಯಕಿ ಹರ್ಮನ್‌ಪ್ರೀತ್ ಕೌರ್ 30 ಎಸೆತಗಳಲ್ಲಿ 33 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ ಕನ್ನಡತಿ ಶ್ರೇಯಾಂಕ ಮಾಡಿದ 18ನೇ ಓವರ್ನಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಕೌರ್ ಔಟಾದ ಬಳಿಕ ಮುಂಬೈ ತಂಡದ ಇನ್ನಿಂಗ್ಸ್ ಆಮೆಗತಿಯಲ್ಲಿ ಸಾಗಿತು.
ಹೀಗಾಗಿ ತಂಡ 12 ಎಸೆತಗಳಲ್ಲಿ 15 ರನ್ ಕಲೆಹಾಕಲು ಸಾಧ್ಯವಾಗದೆ 5 ರನ್ಗಳಿಂದ ಪಂದ್ಯವನ್ನು ಸೋತಿತು. ಬೆಂಗಳೂರು ಪರ ಕನ್ನಡತಿ ಶ್ರೇಯಾಂಕಾ ಪಾಟೀಲ್ 2 ವಿಕೆಟ್ ಪಡೆದರು. ಬ್ಯಾಟಿಂಗ್ನಲ್ಲಿ ಅಬ್ಬರಿಸುವುದರೊಂದಿಗೆ ಬೌಲಿಂಗ್ನಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ ಎಲಿಸ್ ಪೆರ್ರಿ 1 ವಿಕೆಟ್ ತಮ್ಮ ಖಾತೆಯಲ್ಲಿ ಹಾಕಿಕೊಂಡರು. ಜಾರ್ಜಿಯಾ ವೇರ್‌ಹ್ಯಾಮ್ ಕೂಡ ಒಂದು ವಿಕೆಟ್ ಪಡೆದರು.

ಫ್ರೆಶ್ ನ್ಯೂಸ್

Latest Posts

Featured Videos