ಮತ್ತೆ ಸೋಲುಕಂಡ ಆರ್​ಸಿಬಿ

ಮತ್ತೆ ಸೋಲುಕಂಡ ಆರ್​ಸಿಬಿ

ಬೆಂಗಳೂರು: ಹೊಸ ಅಧ್ಯಾಯ ಎಂದು ಹೇಳಿಕೊಂಡು 2024ರ ಐಪಿಎಲ್‌ನಲ್ಲಿ ಆಡುತ್ತಿರುವ ಆರ್‌ಸಿಬಿಯಿಂದ ಯಾವ ಹೊಸತನವೂ ಕಾಣುತ್ತಿಲ್ಲ. ಸೋಲುವ ರೀತಿಯೂ ಬದಲಾಗಿಲ್ಲ. ನಿನ್ನೆ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಹೀನಾಯ ಸೋಲು ಕಂಡ ಬೆಂಗಳೂರು, ಅಂಕಪಟ್ಟಿಯಲ್ಲಿ ಮೇಲೇಳಲೂ ಇಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್​ನ​ 15 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ  ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಜಯ ಸಾಧಿಸಿದೆ.  ಟಾಸ್‌ ಗೆದ್ದು ಮೊದಲು ಬೌಲ್‌ ಮಾಡಲು ಇಳಿದ ಆರ್‌ಸಿಬಿ, ತಂಡದಲ್ಲಿ ಮಾಡಿದ ಒಂದೇ ಒಂದು ಬದಲಾವಣೆ ಫಲ ನೀಡಲಿಲ್ಲ. ಕಳೆದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದ ವೈಶಾಖ್‌ ವಿಜಯ್‌ಕುಮಾರ್‌ರನ್ನು ಏಕೆ ಆಡಿಸುತ್ತಿಲ್ಲ ಎನ್ನುವ ಗೊಂದಲ ಬಗೆಹರಿಯುವ ಮೊದಲೇ ಕ್ವಿಂಟನ್‌ ಡಿ ಕಾಕ್‌, ಆರ್‌ಸಿಬಿ ಬೌಲರ್‌ಗಳಿಗೆ ಚಚ್ಚಲು ಶುರು ಮಾಡಿದ್ದರು.

ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕ್ವಿಂಟನ್ ಡಿಕಾಕ್ 81 ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್​ ಕಲೆಹಾಕಿತು.

ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡ 153 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ತವರು ಮೈದಾನದಲ್ಲಿ 28 ರನ್​​ಗಳ ಹೀನಾಯ ಸೋಲನುಭವಿಸಿದೆ.

ತವರಿನ ಆಟಗಾರರ ಕೆ.ಎಲ್‌.ರಾಹುಲ್‌ (20) ಹಾಗೂ ದೇವದತ್‌ ಪಡಿಕ್ಕಲ್‌ (06) ಬೇಗನೆ ಔಟದರೂ, ಮಾಜಿ ಆರ್‌ಸಿಬಿ ಆಟಗಾರ ಡಿ ಕಾಕ್‌ (56 ಎಸೆತದಲ್ಲಿ 81 ರನ್‌), ಸತತ 2ನೇ ಅರ್ಧಶತಕ ದಾಖಲಿಸಿದರು.

ಆರ್‌ಸಿಬಿ ಬೌಲರ್‌ಗಳು 16ನೇ ಓವರ್‌ ವರೆಗೂ ಉತ್ತಮ ದಾಳಿ ನಡೆಸಿದರು. ಆ ಹಂತದಲ್ಲಿ ಲಖನೌ 160 ರನ್‌ ತಲುಪಿದರೆ ಹೆಚ್ಚು ಎನ್ನುವಂತಿತ್ತು. ಆದರೆ ನಿಕೋಲಸ್‌ ಪೂರನ್‌, ಆರ್‌ಸಿಬಿ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. 21 ಎಸೆತದಲ್ಲಿ 5 ಸಿಕ್ಸರ್‌ಗಳೊಂದಿಗೆ 40 ರನ್ ಚಚ್ಚಿದರು. ಲಖನೌ 181 ರನ್‌ ಕಲೆಹಾಕಿತು.

‘ಕೆ.ಜಿ.ಎಫ್‌’ಫ್ಲಾಪ್‌: ಇಬ್ಬರು ಎಡಗೈ ಸ್ಪಿನ್ನರ್‌ಗಳೊಂದಿಗೆ ಬೌಲಿಂಗ್‌ ಆರಂಭಿಸಿದ ಲಖನೌಗೆ ಯಶಸ್ಸು ಸಿಕ್ಕಿತು. ಚೊಚ್ಚಲ ಐಪಿಎಲ್‌ ಪಂದ್ಯವಾಡಿದ ಎಂ.ಸಿದ್ಧಾರ್ಥ್‌, ವಿರಾಟ್‌ ಕೊಹ್ಲಿ(22)ಯ ವಿಕೆಟ್‌ ಕಿತ್ತರು. ಡು ಪ್ಲೆಸಿ 19 ರನ್‌ ಗಳಿಸಿ ರನೌಟ್‌ ಆದರೆ, ಮಯಾಂಕ್‌ರ ಪ್ರಚಂಡ ವೇಗಕ್ಕೆ ಮ್ಯಾಕ್ಸ್‌ವೆಲ್‌ (0), ಗ್ರೀನ್‌ (9) ಬಳಿ ಉತ್ತರವಿರಲಿಲ್ಲ.

ಇನ್ನು ತಂಡವೊಂದು ಗೆಲ್ಲುವುದು, ಸೋಲುವುದು ಕ್ರಿಕೆಟ್‌ನಲ್ಲಿ ಇದ್ದಿದ್ದೇ. ಭಾರತೀಯ ವೇಗಿಯೊಬ್ಬ ಗಂಟೆಗೆ 157 ಕಿ.ಮೀ. ವೇಗದಲ್ಲಿ ಬೌಲ್‌ ಮಾಡುವುದನ್ನು ನೋಡುವ ಅವಕಾಶ ಸಿಕ್ಕಿತು. 21 ವರ್ಷದ ‘ಬೌಲಿಂಗ್‌ ಮಷಿನ್‌’, ಲಖನೌ ತಂಡದ ಮಯಾಂಕ್‌ ಯಾದವ್‌, ಆರ್‌ಸಿಬಿ ಬ್ಯಾಟರ್‌ಗಳನ್ನು ನಡುಗಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos