ಡೆಲ್ಲಿ ಉಡೀಸ್‌ ಕಪ್‌ ಗೆದ್ದಾ RCB ಲೇಡೀಸ್

ಡೆಲ್ಲಿ ಉಡೀಸ್‌ ಕಪ್‌ ಗೆದ್ದಾ RCB ಲೇಡೀಸ್

ಬೆಂಗಳೂರು: ದೆಹಲಿಯ ಆರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ WPL ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ 8 ವಿಕೆಟ್ ಗಳಿಂದ ಅದ್ಭುತ ಗೆಲುವು ಸಾಧಿಸುವ ಮೂಲಕ ತಮ್ಮ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಈ ಕ್ಷಣ… ಇದೊಂದು ಕ್ಷಣಕ್ಕಾಗಿ ಆರ್​ಸಿಬಿ ಅಭಿಮಾನಿಗಳು ಕಾಯ್ದಿದ್ದು ಬರೋಬ್ಬರಿ 17 ವರ್ಷಗಳು. ಪ್ರತಿ ಆವೃತ್ತಿಯಲ್ಲೂ ಬೆಟ್ಟದಷ್ಟು ನಿರೀಕ್ಷೆ ಇಟ್ಟು ಕಾಯುತ್ತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು, ಸೋಲಿನ ನಿರಾಸೆ. ಕಳೆದ 16 ಆವೃತ್ತಿಗಳಲ್ಲಿ ಆರ್​ಸಿಬಿ 4 ಬಾರಿ ಫೈನಲ್​ಗೇರಿತ್ತಾದರೂ ಒಮ್ಮೆಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಈಗಲೂ ಆರ್​ಸಿಬಿ ಅಭಿಮಾನಿಗಳ ಕಣ್ಣಲ್ಲಿ ನೀರಿದೆ. ಆದರೆ ಅದು ದುಃಖದ ಕಣ್ಣೀರಲ್ಲ, ಬದಲಿಗೆ 17 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಯಿತಲ್ಲ ಎಂಬ ಆನಂದದ ಕಣ್ಣೀರು. 16 ಆವೃತ್ತಿಗಳ ಐಪಿಎಲ್​ನಲ್ಲಿ ಆರ್​ಸಿಬಿ ಪುರುಷ ತಂಡ ಮಾಡಲಾಗದ ಕೆಲಸವನ್ನು ಆರ್​ಸಿಬಿ ಮಹಿಳಾ ಹುಲಿಗಳ ಪಡೆ ಕೇವಲ ಎರಡನೇ ಆವೃತ್ತಿಯಲ್ಲೇ ಮಾಡಿ ಮುಗಿಸಿದೆ.

ದೆಹಲಿಯ ಆರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ ಸ್ಮೃತಿ ಮಂಧಾನ ನೇತೃತ್ವದ ಆರ್​ಸಿಬಿ ಪಡೆ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಪೂರ್ಣ 20 ಓವರ್​ಗಳನ್ನು ಆಡಲಾಗದೆ 18.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಡೆಲ್ಲಿ ನೀಡಿದ 114 ರನ್​ಗಳ ಅಲ್ಪ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ವೇಗದ ಆರಂಭ ಸಿಗದಿದ್ದರೂ 49 ರನ್​ಗಳ ಉಪಯುಕ್ತ ಆರಂಭ ಸಿಕ್ಕಿತು. ಈ ಹಂತದಲ್ಲಿ ಸೋಫಿ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 32 ರನ್​ಗಳ ಅಮೂಲ್ಯ ಕಾಣಿಕೆ ನೀಡಿದರು. ಆ ಬಳಿಕ ಜೊತೆಯಾದ ಸ್ಮೃತಿ ಹಾಗೂ ಎಲ್ಲಿಸ್ ಪೆರ್ರಿ 33 ರನ್​ಗಳ ಜೊತೆಯಾಟ ನಡೆಸಿದರು. ಆರಂಭದಿಂದಲೂ ತಾಳ್ಮೆಯ ಆಟವಾಡುತ್ತಿದ್ದ ಸ್ಮೃತಿ ಗೆಲುವಿನಂಚಿನಲ್ಲಿ ಲಯ ಕಳೆದುಕೊಂಡು 39 ಎಸೆತಗಳಲ್ಲಿ 3 ಬೌಂಡರಿ ಸಹಿತ 33 ರನ್​ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಅಂತ್ಯದಲ್ಲಿ ಬಂದ ರಿಚಾ ಘೋಷ್, ಎಲ್ಲಿಸ್ ಪೆರ್ರಿಗೆ ಅಜೇಯ ಸಾಥ್ ನೀಡಿದಲ್ಲದೆ, ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಪೆರ್ರಿ 37 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್​ ಬಾರಿಸಿದರೆ, ರಿಚಾ 14 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 17 ರನ್ ಸಿಡಿಸಿದರು.

ಆರ್​ಸಿಬಿಗೆ ಆಪತ್ಬಾಂಧವಿಯಂತೆ ಬಂದ ಸೋಫಿ ಮೊಲಿನೆಕ್ಸ್ ಒಂದೇ ಓವರ್​ನಲ್ಲಿ 3 ವಿಕೆಟ್ ಕಬಳಿಸಿ ಡೆಲ್ಲಿ ತಂಡಕ್ಕೆ ಬಿಗ್ ಶಾಕ್ ನೀಡಿದರು.ಕೊನೆಯ ಮೂರು ವಿಕೆಟ್​ಗಳನ್ನು ಕನ್ನಡತಿ ಶ್ರೇಯಾಂಕ ಪಡೆಯುವಲ್ಲಿ ಯಶಸ್ವಿಯಾದರು. ಶ್ರೇಯಾಂಕ, ಮಿನ್ನು ಮಣಿ (5 ರನ್) ಅರುಂಧತಿ ರೆಡ್ಡಿ (10 ರನ್) ತನಿಯಾ ಭಾಟಿಯಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗೆ ಕಳುಹಿಸಿದರು. ಫೈನಲ್ ಪಂದ್ಯದಲ್ಲಿ ಶ್ರೇಯಾಂಕ 4 ವಿಕೆಟ್ ಪಡೆಯುವ ಮೂಲಕ ಲೀಗ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos