ಮತ್ತೆ ಮುಗ್ಗರಿಸಿದ RCB

ಮತ್ತೆ ಮುಗ್ಗರಿಸಿದ RCB

ಬೆಂಗಳೂರು: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಿನ್ನೆ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಕೊನೆಯ ಎಸೆತದಲ್ಲಿ 1 ರನ್‌ನಿಂದ ರೋಚಕ ಗೆಲುವು ಸಾಧಿಸಿದೆ.

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರಲ್ಲಿ ಸೋಲಿನ ಕೂಪದಿಂದ ಎದ್ದುಬರಲು ಮತ್ತೊಮ್ಮೆ ವಿಫಲವಾಗಿದ್ದು, ಪ್ಲೇಆಫ್ ಹಂತ ತಲುಪುವ ಕನಸು ಬಹುತೇಕ ಅಂತ್ಯಗೊಂಡಂತಾಗಿದೆ. ಆಡಿದ 8 ಪಂದ್ಯಗಳಲ್ಲಿ 7 ಸೋಲು ಮತ್ತು 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ ಮತ್ತು ಸುನಿಲ್ ನರೈನ್ ಜೋಡಿ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 56 ರನ್‌ಗಳ ಜೊತೆಯಾಟ ನಿರ್ಮಿಸಿದರು. ಈ ವೇಳೆ ಕೇವಲ 14 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಮೇತ 48 ರನ್ ಗಳಿಸಿದ್ದ ಫಿಲ್ ಸಾಲ್ಟ್ ಔಟಾದರು.  ಕೊನೆಯಲ್ಲಿ ರಿಂಕು ಸಿಂಗ್ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದರೆ, ಆಂಡ್ರೆ ರಸೆಲ್ 20 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ ಅಜೇಯ 27 ರನ್ ಬಾರಿಸಿದರು. ಫಿಲ್ ಸಾಲ್ಟ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು.

223 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ವಿಲ್ ಜ್ಯಾಕ್ಸ್ ಮತ್ತು ರಜತ್ ಪಾಟಿದಾರ್ ಅವರ ಸ್ಫೋಟಕ ಅರ್ಧಶತಕಗಳ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 1 ರನ್‌ನಿಂದ ರೋಚಕ ಸೋಲು ಅನುಭವಿಸಿತು.

19ನೇ ಓವರ್‌ನ ಕೊನೆಯ ಎಸೆತದಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಬೀಳುವುದರೊಂದಿಗೆ ಆರ್‌ಸಿಬಿ ಕನಸು ಕಮರಿ ಹೋಗಿತ್ತು. ಆದರೆ ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 21 ರನ್‌ಗಳು ಬೇಕಾಗಿದ್ದಾಗ ಕರ್ಣ್ ಶರ್ಮಾ ಅವರು ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಮೂರು ಸಿಕ್ಸರ್ ಬಾರಿಸಿ ಗೆಲುವಿನ ಆಸೆ ಚಿಗುರಿಸಿದ್ದರು.

ನಂತರ ಕೊನೆಯ 2 ಎಸೆತಗಳಲ್ಲಿ 3 ರನ್ ಬೇಕಾಗಿದ್ದಾಗ ಮಿಚೆಲ್ ಸ್ಟಾರ್ಕ್ ಹಿಡಿದ ಅದ್ಭುತ ಕ್ಯಾಚ್‌ಗೆ ಕರ್ಣ್ ಶರ್ಮಾ ಔಟಾದರು. ಅಂತಿಮ ಎಸೆತದಲ್ಲಿ 3 ರನ್ ಬೇಕಾಗಿದ್ದಾಗ ಲಾಕಿ ಫರ್ಗ್ಯುಸನ್ 2 ರನ್ ಓಡಲು ಹೋಗಿ ರನೌಟ್ ಆದರು. ಈ ಮೂಲಕ 1 ರನ್‌ನಿಂದ ಸೋಲಬೇಕಾಯಿತು.

 

ಫ್ರೆಶ್ ನ್ಯೂಸ್

Latest Posts

Featured Videos