ರಂಗೋಲಿ ಕೆಳಗೆ ತೂರಿತಾ ನಮೋ ಟಿ.ವಿ.?

ರಂಗೋಲಿ ಕೆಳಗೆ ತೂರಿತಾ ನಮೋ ಟಿ.ವಿ.?

ಬೆಂಗಳೂರು, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಝೀ ನ್ಯೂಸ್‌, ರಿಪಬ್ಲಿಕ್‌ ಟಿವಿ ಸೇರಿದಂತೆ ನೂರಾರು ವಾಹಿನಿಗಳಿರುವಾಗ ಮೋದಿ ಮಂತ್ರ ಪಠಣೆಗಾಗಿ ಹೊಸ ವಾಹಿನಿ ಯಾಕೆ? ಎಂಬ ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಂತಹ ತಮಾಷೆಗಳ ಆಚೆಗೆ ಇರುವ ಗಂಭೀರವಾದ ಪ್ರಶ್ನೆ ಏನೆಂದರೆ, ನೀತಿ ಸಂಹಿತೆ ಎಂಬ ಪುಸ್ತಕದ ಬದನೆಕಾಯಿಯನ್ನು ಪಾಲಿಸುವುದಷ್ಟೇ ಚುನಾವಣಾ ಆಯೋಗದ ಕೆಲಸವೇ? ಎಂಬುದು. ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬಗಳು ಎಂದು ಕರೆಯುವ ಚುನಾವಣೆಗಳನ್ನು ಕಾರ್ಯರೂಪಕ್ಕೆ ಇರುವ ಹೊಣೆ ಹೊತ್ತಿರುವ ಅಯೋಗ ಈಗ ಅಪನಂಬಿಕೆಗೆ ಗುರಿಯಾಗಿದೆ. ದೇಶದ ಬಹುತೇಕ ಸಂಸ್ಥೆಗಳು ತಮ್ಮ ಪಾವಿತ್ರ್ಯತೆ ಕಳೆದುಕೊಂಡ ಹಾಗೆಯೇ ಚುನಾವಣಾ ಆಯೋಗ ಕೂಡ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿತಾ? ಇದಕ್ಕೆ ಉತ್ತರ ಸಿಗಲು ಹೆಚ್ಚು ದಿನಗಳು ಕಾಯಬೇಕಿಲ್ಲ. ಡಿಟಿಎಚ್‌ ಮತ್ತು ಕೇಬಲ್‌ ಸೇವೆ ನೀಡುವವರಿಗೆ ‘ವ್ಯಾಲ್ಯೂ ಆಡೆಡ್‌ ಸರ್ವಿಸ್‌ (ಬೇಡಿಕೆ ಆಧರಿತ ಮೌಲ್ಯಯುತ ಸೇವೆ)‘ ಹೆಸರಿನಲ್ಲಿ ವಾಹಿನಿ ನಡೆಸಲು ಅವಕಾಶವಿದೆ. ಇದಕ್ಕೆ ಯಾವುದೇ ಅನುಮತಿಗಳು ಬೇಕಾಗಿಲ್ಲ. ಉದಾಹರಣೆಗೆ, “ನೀವು ಟಾಟಾ ಸ್ಕೈ ಆರಂಭಿಸಿದರೆ ಅಲ್ಲಿ ಶೋಕೇಸ್‌ ಎಂಬ ಐಕಾನ್‌ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಅಡುಗೆಯಿಂದ ಹಿಡಿದು ಸಿನಿಮಾ ಮೊದಲಾದ ಬೇಡಿಕೆಯ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇದಕ್ಕೆ ಲೈಸನ್ಸ್‌ ಇಲ್ಲ. ಈ ಮಾಹಿತಿಯನ್ನು ಡಿಟಿಎಚ್‌ನವರೇ ಪ್ರಸಾರ ಮಾಡುತ್ತಾರೆ. ಇದೇ ವರ್ಗದಲ್ಲಿ ‘ನಮೋ ಟಿವಿ’ಯೂ ಪ್ರಸಾರವಾಗುತ್ತಿದೆ. ನಮೋ ಟಿವಿಯ ತನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಉಪಗ್ರಹವನ್ನು ಅವಲಂಬಿಸಿಲ್ಲ. ಬದಲಿಗೆ ಇಂಟರ್ನೆಟ್‌ ಮೂಲಕ ತಲುಪಿಸಲಾಗುತ್ತದೆ. ಹೀಗಾಗಿ ಇದಕ್ಕೆ ಲೈಸನ್ಸ್‌ ಬೇಕಾಗಿಲ್ಲ,” ಎನ್ನುತ್ತಾರೆ ‘ಬಿಸಿನೆಸ್‌ ಟುಡೆ’ಗೆ ಪ್ರತಿಕ್ರಿಯೆ ನೀಡಿರುವ ಓರ್ವ ಬ್ರಾಡ್‌ಕಾಸ್ಟಿಂಗ್‌ ವೃತ್ತಿಪರರು.

ಫ್ರೆಶ್ ನ್ಯೂಸ್

Latest Posts

Featured Videos