ಚಾರಣಿಗರು, ಸದ್ಭಕ್ತರ ರಂಗನಗಿರಿ ರಂಗನಾಥ ದೇಗುಲ

ಚಾರಣಿಗರು, ಸದ್ಭಕ್ತರ ರಂಗನಗಿರಿ ರಂಗನಾಥ ದೇಗುಲ

ಬೆಂಗಳೂರು, ಅ. 14: ಮಾಗಡಿ ಗಡಿಯಲ್ಲಿರುವ ಮಾದಿಗೊಂಡನಹಳ್ಳಿ ಗುಡ್ಡದ ರಂಗನ ಗಿರಿಯಲ್ಲಿರುವ ರಂಗನಾಥಸ್ವಾಮಿ ದೇಗುಲ ಚಾರಣ ಹಾಗೂ ರಂಗನಾಥನ ದರ್ಶನ ಹಾಗೂ ಗಿರಿ ಏರಿ ಪ್ರಕೃತಿ ಸವಿಯಲು ಮನಶಾಂತಿಯ ತಪೋದಾಮ.

ಮಾಗಡಿ ಗಡಿಯಲ್ಲಿರುವ ಮಾದಿಗೊಂಡನಹಳ್ಳಿ ಗುಡ್ಡದ ರಂಗನ ಗಿರಿಯಲ್ಲಿರುವ ರಂಗನಾಥಸ್ವಾಮಿ ದೇಗುಲ ಚಾರಣ ಹಾಗೂ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಕುದೂರು ಹೋಬಳಿಯ ಮಾದಿಗೊಂಡನ ಹಳ್ಳಿಯಿಂದ ಅನತಿ ದೂರದಲ್ಲಿ  ಬೆಟ್ಟವಿದೆ. ಗಿರಿ ದೇಗುಲದಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ಏಕಶಿಲಾ ರಂಗನಾಥಸ್ವಾಮಿ ವಿಗ್ರಹವಿದೆ. ಇಂದಿಗೂ ಲಕ್ಷಾಂತರ ಭಕ್ತವೃಂದವನ್ನು ಹೊಂದಿದೆ.

ಹಚ್ಚ ಹಸುರಿನ ನಿಸರ್ಗ ಗಿರಿ

ಸಾವನದುರ್ಗ ಬೆಟ್ಟದಿಂದ ಶಿವಗಂಗೆ ಬೆಟ್ಟಕ್ಕೆ ಗಜಪಡೆ ನಿರ್ಮಿಸಿಕೊಂಡ ಗಜ ಪಥದ ಸೆರಗಿನಂಚಿನಲ್ಲಿರುವ ಮಾದಿಗೊಂಡನಹಳ್ಳಿ ಬೆಟ್ಟ ಹಾಗೂ ರಂಗನಾಥಸ್ವಾಮಿ ದೇವಾಲಯವಿರುವ ಜಾಗ ನಿಸರ್ಗಸಿರಿ ಅನಾವರಣಗೊಂಡಿರುವ ರಮ್ಯತಾಣ. ತೆಂಗು, ಆಲ, ಮುತ್ತಗ, ಅರಳಿ, ಬಿಲ್ವ, ಸಾಗವಾನಿ, ತೇಗ ಮುಂತಾದ ತರುಲತೆಗಳಿಂದ ಕೂಡಿದ ಕಾನನದ ಉತ್ತುಂಗದಲ್ಲಿರುವ ಬೆಟ್ಟದ ಮೇಲೆ ಸಿಗುವ ತಂಗಾಳಿ, ಹಸಿರು ನೋಟ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.

ಏಕಶಿಲಾ ವಿಗ್ರಹ

ಪಶ್ಚಿಮಾಭಿಮುಖವಾಗಿ ನಿಂತಿರುವ ಸುಮಾರು 12 ಅಡಿ ಎತ್ತರದ ಏಕಶಿಲಾ ಮೂರ್ತಿ ರಂಗನಾಥನೆಂದು ಪೂಜೆಗೊಳ್ಳುತ್ತಿದ್ದರೂ,ಮೂಲತಃ ಹನುಮನ ಮೂರ್ತಿ ನೋಡಲು ಸಹ ಹನುಮಂತನಂತೆಯೇ ಇದೆ. ಟಿಪ್ಪು ಸುಲ್ತಾನನ ಸೈನ್ಯದಿಂದ ದೇಗುಲವನ್ನು ರಕ್ಷಿಸಿಕೊಳ್ಳಲು ಹನುಮನಿಗೆ ರಂಗನಾಥ ಎಂದು ನಾಮಕರಣ ಮಾಡಲಾಗಿತ್ತು ಎಂಬ ಐತಿಹ್ಯವಿದೆ. ಗರ್ಭಗುಡಿಯಿಂದ ಹೊರಬಂದರೆ ಪಕ್ಕದಲ್ಲಿ ಜಯ, ವಿಜಯ ದ್ವಾರಪಾಲಕರ ವಿಗ್ರಹಗಳಿವೆ. ದೇಗುಲದ ಮುಂಬದಿಯಲ್ಲಿ ದೇವಾಲಯ ನಿರ್ಮಾತೃವಿನ ವಿಗ್ರಹವಿದೆ.ಇತಿಹಾಸಕಾರರು ದೇಗುಲದ ಇತಿಹಾಸವನ್ನು ಈಗಲೂ ಅಧ್ಯಯನ ಮಾಡುತ್ತಿದ್ದಾರೆ.

ಗಂಗಾ ಪೂಜೆಗೆ ಕಲ್ಯಾಣಿ

ದೇವಸ್ಥಾನದ ಪೂರ್ವದಿಕ್ಕಿನಲ್ಲಿ ಪ್ರಾಚೀನ ಕಲ್ಯಾಣಿ ಇದ್ದು, ಈ ಗಂಗಾ ಜಲದಿಂದಲೇ ರಂಗನಾಥನಿಗೆ ನಿತ್ಯ ಅಭಿಷೇಕ ಮಾಡಲಾಗುತ್ತದೆ. ಪ್ರಸಾದ ತಯಾರಿಕೆಗೂ ಇದೇ ಕಲ್ಯಾಣಿ ನೀರನ್ನು ಉಪಯೋಗಿಸಲಾಗುತ್ತದೆ. ಜಾತ್ರೆ, ಸಂಕ್ರಾಂತಿ ದಿನಗಳಲ್ಲಿ ಕಲ್ಯಾಣಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಐತಿಹಾಸಿಕ ವೈಭವ

ಬೆಟ್ಟದ ರಂಗನಾಥಸ್ವಾಮಿ ದೇಗುಲದ ಹಿಂಬದಿಯಲ್ಲಿ 50 ಕಂಬಗಳ ಅರವಂಟಿಕೆ ಇದೆ. ಇದರಲ್ಲೇ ಪ್ರಸಾದ ತಯಾರಿಸಿ ದೇವರಿಗೆ ನೈವೇದ್ಯ ಮಾಡಿದ ಬಳಿಕ ಭಕ್ತರು ಸ್ವೀಕರಿಸುತ್ತಿದ್ದರು ಎಂಬುದನ್ನು ಸಾಕ್ಷೀಕರಿಸುವ ಕೆತ್ತನೆಯ ಕುರುಹುಗಳಿವೆ.

ಸಂಕ್ರಮಣ ದೊಡ್ಡಹಬ್ಬ

ಶ್ರಾವಣ, ಕಾರ್ತಿಕ, ಬೇಸಿಗೆಯ ಜಾತ್ರೆ ಜತೆಗೆ ವಾರಕ್ಕೆ ಎರಡು, ಮೂರು ಬಾರಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಬೆಟ್ಟದ ಮೇಲೆ ಆಚರಿಸುವ ಮಕರ ಸಂಕ್ರಾಂತಿ ಇಲ್ಲಿನ ಬಹುದೊಡ್ಡ ಹಬ್ಬ. ಆ ದಿನ 101 ಎಡೆ ಪೊಂಗಲ್ ಸೇವೆ  ನಡೆಸಲಾಗುತ್ತದೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಹಬ್ಬ ಹರಿದಿನಗಳಂದ ರಂಗನಾಥನಿಗೆ ನರಸಿಂಹನ ಅಲಂಕಾರ ಮಾಡಿ ಪೂಜಿಸುವ ವಾಡಿಕೆ ಇದೆ.

ವಿಹಾರದ ನೆಮ್ಮದಿಯ ಗಿರಿ

ಬೆಂಗಳೂರಿನಿಂದ ಧರ್ಮಸ್ಥಳ, ಆದಿಚುಂಚನಗಿರಿ, ಕುಕ್ಕೆ ಸುಬ್ರಮಣ್ಯ, ಶ್ರವಣಬೆಳಗೊಳ, ಯಡೆಯೂರು ಮೊದಲಾದ ತೀರ್ಥಕ್ಷೇತ್ರಗಳಿಗೆ ಪಾದಯಾತ್ರೆ ತೆರಳುವವರಿಗೆ ರಂಗನಾಥ ದೇಗುಲ ವಿಶ್ರಾಂತಿ ತಾಣವಾಗಿದೆ.

ಸೇವಾಟ್ರಸ್ಟ್

ಗುರು ಪೀಠದ ಆಚಾರ್ಯರು ಮೊದಲಿನಿಂದಲೂ ದೇವಾಲಯದ ಧಾರ್ಮಿಕ ಆಚರಣೆಗಳ ಜವಾಬ್ಧಾರಿ ಹೊತ್ತು ದೇವಾಲಯದ ಸೇವಾಕೆಲಸಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈಗ ದೇಗುಲದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಗುಡ್ಡದ ರಂಗನಾಥ ಸ್ವಾಮಿ ಸೇವಾ ಟ್ರಸ್ಟ್ ಸ್ಥಾಪಿಸಿ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿಕೊಂಡು ಹೋಗಲಾಗುತ್ತಿದೆ.

ದಶದಿಕ್ಕುಗಳೂ ರಂಗನಾಥಮಯ

ಮಾಂಡವ್ಯ ಋಷಿಗಳು ಸ್ಥಾಪಿಸಿದ ತಿರುಮಲೆ ರಂಗ, ಮಾದಿಗೊಂಡನಹಳ್ಳಿ ಏಕಶಿಲಾ ವಿಗ್ರಹವಾದ ಗುಡ್ಡದ ರಂಗನಾಥಸ್ವಾಮಿ, ಸೋಲೂರು ತಟ್ಟೆಕೆರೆಯ ರಂಗನಾಥ, ತಿಪ್ಪಸಂದ್ರದ ದೊಡ್ಡಮುದುಗೆರೆ ರಂಗನಾಥ, ಶ್ರೀಗಿರಿಪುರದ ಬಳಿಯ ಬೆಟ್ಟದ ರಂಗ, ಕುಣಿಗಲ್ ಸಮೀಪದ ಬೆಟ್ಟದ ರಂಗ ಹೀಗೆ ಕೆಂಪೇಗೌಡರ ಆಳ್ವಿಕೆಯ ಪ್ರದೇಶದ ದಶ ದಿಕ್ಕೂ ದಿಕ್ಕೂಗಳಲ್ಲಿಯೂ ರಂಗನಾಥನ ದೇವಾಲಯಗಳು ಸ್ಥಾಪಿತವಾಗಿದ್ದು ಕೆಂಪೇಗೌಡರಿಗೆ ಶ್ರೀರಂಗನ ಮೇಲಿದ್ದ ಭಕ್ತಿಯನ್ನು ಎತ್ತಿತೋರುತ್ತದೆ.

ಪ್ರೇಕ್ಷಣೀಯ ಸ್ಥಳ

ಗುಡ್ಡದ ರಂಗನ ಗಿರಿಯ ಸುಮಾರು ೫೦೦ ಅಡಿಗಳಿಗಿಂತಲೂ ಎತ್ತರವಾದ ಬೆಟ್ಟದಮೇಲೆ ನಿಂತು ಪ್ರಕೃತಿ ಮಾತೆಯನ್ನು ನೋಡುವುದೇ ಒಂದು ಆನಂದ. ಬೆಟ್ಟದ ರಾಜಗೋಪುರದ ಮುಂಭಾಗ ಪ್ರಾಂಗಣದ ತುದಿಯಲ್ಲಿ ನಿಂತು ನೋಡಿದರೆ. ಆಗುಂಬೆ, ಮೈಸೂರು ಚಾಮುಂಡಿ ಬೆಟ್ಟದಂತೆಯೇ ಇಲ್ಲಿಯೂ ದೃಶ್ಯವೈಭವ ನೋಡಲು ಸಿಗುತ್ತದೆ. ಭೈರವದುರ್ಗ, ಶಿವಗಂಗೆಬೆಟ್ಟ, ಚಿಲೂರು ಬೆಟ್ಟ, ಬೆಂಗಳೂರು – ಹಾಸನ ರೈಲ್ವೆಹಳಿ, ಕೆರೆತೊರೆಗಳು, ರೈತರ ಕೃಷಿ ಭೂಮಿಯ ಹಸಿರು ಕಣ್ಣಿಗೆ ಹಬ್ಬವೇ ಸರಿ|

ಗುಡ್ಡದರಂಗನ ಗಿರಿಗೆ ಹೀಗೆ ಬನ್ನಿ

ಗುಡ್ಡದ ರಂಗನಾಥಸ್ವಾಮಿ ಬೆಟ್ಟ ಬೆಂಗಳೂರಿನಿಂದ ೪೫ ಕಿ.ಮೀ ದೂರದಲ್ಲಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೊಲೂರು ಸಮೀಪ ಇರುವ ಪ್ರಕೃತಿ ಚಿಕಿತ್ಸಾಲಯದ ಬಳಿ ಬೆಟ್ಟಕ್ಕೆ ರಸ್ತೆ ಇದೆ. ಬೆಂಗಳೂರಿನಿಂದ ಹಾಸನ, ತುರುವೆಕೆರೆ, ಕುಣಿಗಲ್ ಮಾರ್ಗದ ಬಸ್ಗಳಲ್ಲಿ ಪ್ರಯಾಣ ಮಾಡಬಹುದು.ಪ್ರತಿ ಶನಿವಾರ, ಭಾನುವಾರ ಬೆಟ್ಟಕ್ಕೆ ಬರುವ ಭಕ್ತರಿಗೆ ದಾಸೋಹದ ವ್ಯವಸ್ಥೆ ಇದ್ದು, ಪ್ರವಾಸಿಗರಿಗೆ ತಂಗಲು ವಸತಿಗೃಹಗಳನ್ನು ನಿರ್ಮಿಸಲಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos