ಮಿಜೋರಾಂ ರಾಜ್ಯಪಾಲ ಹುದ್ದೆಗೆ ರಾಜಶೇಖರನ್ ರಾಜೀನಾಮೆ

ಮಿಜೋರಾಂ ರಾಜ್ಯಪಾಲ ಹುದ್ದೆಗೆ ರಾಜಶೇಖರನ್ ರಾಜೀನಾಮೆ

ಕೊಚ್ಚಿ, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಮಿಜೋರಾಂ ರಾಜ್ಯಪಾಲ ಕೆ.ರಾಜಶೇಖರನ್ ಶುಕ್ರವಾರ ಮಧ್ಯಾಹ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತವರು ರಾಜ್ಯ ಕೇರಳಕ್ಕೆ ವಾಪಸಾಗುವ ಅವರ ಹಾದಿ ಸುಗಮವಾಗಿದೆ. ರಾಜಶೇಖರನ್ ಪ್ರತಿಷ್ಠಿತ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ.

ರಾಜಶೇಖರನ್ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಸ್ವೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ದೃಢಪಡಿಸಿದೆ. ಅಸ್ಸಾಂನ ರಾಜ್ಯಪಾಲ ಜಗದೀಶ್ ಮುಖಿಗೆ ಮೀಜೋರಾಂಗೆ ನೂತನ ರಾಜ್ಯಪಾಲರ ನೇಮಕವಾಗುವ ತನಕ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ರಾಜಶೇಖರನ್‌ರನ್ನು ಕರ್ತವ್ಯದಿಂದ ಮುಕ್ತ ಗೊಳಿಸಿ ತಿರುವನಂತಪುರದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಬಿಜೆಪಿಯ ಕೇರಳ ಘಟಕ ಕೇಂದ್ರ ನಾಯಕರಿಗೆ ಮನವಿ ಮಾಡಿದ ಮರುದಿನವೇ ರಾಜಶೇಖರನ್ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜಶೇಖರನ್ ಕಳೆದ ವರ್ಷದ ಮೇ ತನಕ ಕೇರಳ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಪ್ರಮುಖ ಉಪ ಚುನಾವಣೆಗೆ ಮೊದಲು ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಈಶಾನ್ಯ ರಾಜ್ಯಕ್ಕೆ ಕಳುಹಿಸಿಕೊಡಲಾಗಿತ್ತು. ರಾಜಶೇಖರನ್ ನಾಯಕತ್ವದಲ್ಲೇ ಬಿಜೆಪಿ 2016ರಲ್ಲಿ ಕೇರಳ ವಿಧಾನಸಭೆಯಲ್ಲಿ ತನ್ನ ಖಾತೆಯನ್ನು ತೆರೆದಿತ್ತು. ರಾಜ್ಯದ ಇತರ 8 ಕಡೆಗಳಲ್ಲಿ 2ನೇ ಸ್ಥಾನ ಪಡೆದಿತ್ತು.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಒ.ರಾಜಗೋಪಾಲ್, ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್‌ಗೆ 15,000 ಮತಗಳಿಂದ ಸೋಲುವ ಮೊದಲು 7ರಲ್ಲಿ 4 ವಿಭಾಗಗಳಲ್ಲಿ ಮುನ್ನಡೆಯಲ್ಲಿದ್ದರು. ಈ ಬಾರಿ ತಿರುವನಂತಪುರದಿಂದ ರಾಜಶೇಖರನ್ ಸ್ಪರ್ಧಿಸಿದರೆ ಹಾಲಿ ಸಂಸದ ತರೂರ್, ಸಿಪಿಐ ಅಭ್ಯರ್ಥಿ ಸಿ.ದಿನಕರನ್ ಹಾಗೂ ರಾಜಶೇಖರನ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಫ್ರೆಶ್ ನ್ಯೂಸ್

Latest Posts

Featured Videos