ರಾಹುಲ್ ಗಾಂಧಿ ಸ್ಪರ್ಧೆಗಿದ್ದ ಆತಂಕ ದೂರ: ನಾಮಪತ್ರ ಸಿಂಧು!

ರಾಹುಲ್ ಗಾಂಧಿ ಸ್ಪರ್ಧೆಗಿದ್ದ ಆತಂಕ ದೂರ: ನಾಮಪತ್ರ ಸಿಂಧು!

ಅಮೇಥಿ, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಕಾಂಗ್ರೆಸ್ ಅಧ್ಯಕ್ಷ, ಉತ್ತರಪ್ರದೇಶದ ಅಮೇಥಿ ಕ್ಷೇತ್ರದ ಹಾಲಿ ಸಂಸದ ರಾಹುಲ್ ಗಾಂಧಿ ಅವರ ನಾಮಪತ್ರದಲ್ಲಿರುವ ಹೆಸರು ಬದಲಾವಣೆ ಕುರಿತಂತೆ ಬಂದಿದ್ದ ಆಕ್ಷೇಪವನ್ನು ಚುನಾವಣಾ ಆಯೋಗ ಇತ್ಯರ್ಥಗೊಳಿಸಿದೆ. ವಯನಾಡು ಕ್ಷೇತ್ರಕ್ಕೂ ಮುನ್ನ ಅಮೇಥಿಯಿಂದಯಿಂದ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಫಿಡವಿಟ್ ಗೆ ಆಕ್ಷೇಪ ಎತ್ತಲಾಗಿತ್ತು. ಅಮೇಥಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಧ್ರುವ್ ಲಾಲ್ ಆಕ್ಷೇಪಣೆ ಸಲ್ಲಿಸಿದ್ದರು. ಈ ಆಕ್ಷೇಪಣೆಗೆ ಉತ್ತರ ನೀಡುವಂತೆ ಚುನಾವಣೆ ಅಧಿಕಾರಿಗಳು ರಾಹುಲ್ ಗಾಂಧಿಗೆ ಸೂಚಿಸಿದ್ದರು. ಇದಕ್ಕೆ ರಾಹುಲ್ ಗಾಂಧಿ ಅವರ ವಕೀಲ ನೀಡಿರುವ ಉತ್ತರ ಸಮರ್ಪಕವಾಗಿದ್ದು, ಅಫಿಡವಿಟ್ ನಲ್ಲಿ ಯಾವುದೇ ಲೋಪ ದೋಷ ಕಂಡು ಬಂದಿಲ್ಲ. ನಾಮಪತ್ರ ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಅಮೇಥಿಯ ಚುನಾವಣಾಧಿಕಾರಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು 2004ರಿಂದ ಸಲ್ಲಿಸುತ್ತಾ ಬಂದಿರುವ ಚುನಾವಣೆ ಅಫಿಡವಿಟ್ ನಲ್ಲಿ ರೌಲ್ ವಿನ್ಸಿ ಎಂಬ ಹೆಸರಿನಲ್ಲೇ ಪದವಿ ಪ್ರಮಾಣ ಪತ್ರ ಇದೆ. ರಾಹುಲ್ ಗಾಂಧಿ ಅವರಿಗೆ ಬೇರೆ ದೇಶಗಳಲ್ಲಿ ಬೇರೆ ಹೆಸರುಗಳಿವೆಯಾ ಅಂತ ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್ ಪ್ರತಿಕ್ರಿಯಿಸಿದ್ದರು. ಧ್ರುವ್ ಲಾಲ್ ಸಲ್ಲಿಸಿದ ಆಕ್ಷೇಪದಲ್ಲಿ ಕೇಂಬ್ರಿಡ್ಜ್ ವಿ.ವಿ. ನೀಡಿದ ಪ್ರಮಾಣ ಪತ್ರವನ್ನು ಲಗತ್ತಿಸಲಾಗಿತ್ತು. ಅದರಲ್ಲಿ ಮಿಸ್ಟರ್ ರೌಲ್ ವಿನ್ಸಿ ಅವರು ಡೆವಲಪ್ ಮೆಂಟ್ ಸ್ಟಡೀಸ್ ನಲ್ಲಿ ಎಂ.ಫಿಲ್., ಅನ್ನು 2004-05ರಲ್ಲಿ ಸರಾಸರಿ 62.88% ಪಡೆದು, ಅಂದರೆ ತೇರ್ಗಡೆ ಆಗಲು ಬೇಕಾದ ಶೇ 60ಕ್ಕಿಂತ ಹೆಚ್ಚು ಅಂಕದೊಂದಿಗೆ 2004-05ರ ಶೈಕ್ಷಣಿಕ ವರ್ಷದಲ್ಲಿ ಪಾಸಾಗಿದ್ದಾರೆ ಅಂತಿದೆ. ರಾಹುಲ್ ಅವರ ಹೆಸರು ಪ್ರಮಾಣ ಪತ್ರದಲ್ಲಿ ರೌಲ್ ವಿನ್ಸಿ ಎಂದು ಮುದ್ರಿತವಾಗಿದೆ. ಉಮೇದುವಾರಿಕೆ ಪತ್ರದಲ್ಲಿ ರಾಹುಲ್ ಗಾಂಧಿ ಎಂದಿದೆ. ಈ ಬಗ್ಗೆ ಸ್ಪಷ್ಟನೆ ಬೇಕು ಎಂದು ಆಕ್ಷೇಪ ಎತ್ತಲಾಗಿತ್ತು. ಈಗ ರಾಹುಲ್ ಗಾಂಧಿ ಅವರ ಜೀವಕ್ಕೆ ಭಯವಿದ್ದ ಕಾರಣ ಗೌಪ್ಯವಾಗಿ ವ್ಯಾಸಂಗ ಮಾಡಬೇಕಾಯಿತು. ಅವರು ಬ್ರಿಟಿಷ್ ಪೌರತ್ವ ಹೊಂದಿಲ್ಲ. ರೌಲ್ ವಿನ್ಸಿ ಹಾಗೂ ರಾಹುಲ್ ಗಾಂಧಿ ಹೆಸರಿನ ಗೊಂದಲದ ಬಗ್ಗೆ ಈ ಹಿಂದೆಯೇ ಆಯೋಗಕ್ಕೆ ಸ್ಪಷ್ಟನೆ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಪರ ವಕೀಲರು ನೀಡಿದ ವಾದವನ್ನು ಆಯೋಗ ಪುರಸ್ಕರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos