ಧರ್ಮದ ಹೆಸರಲ್ಲಿ ದೇಶವನ್ನು ವಿಭಜಿಸಲು ಬಿಡುವುದಿಲ್ಲ: ರಾಹುಲ್ ಗಾಂಧಿ

ಧರ್ಮದ ಹೆಸರಲ್ಲಿ ದೇಶವನ್ನು ವಿಭಜಿಸಲು ಬಿಡುವುದಿಲ್ಲ: ರಾಹುಲ್ ಗಾಂಧಿ

ಹಾವೇರಿ, ಮಾ.9, ನ್ಯೂಸ್ ಎಕ್ಸ್ ಪ್ರೆಸ್:  ಲೂಟಿಕೋರರನ್ನು ಜೈಲಿಗೆ ಹಾಕುತ್ತೇವೆ. ಜಾತಿ, ಧರ್ಮದ ಹೆಸರಲ್ಲಿ ದೇಶವನ್ನು ವಿಭಜಿಸಲು ಬಿಡುವುದಿಲ್ಲ. ದೇಶದ ಜನರ ನಡುವೆ ಕೋಮು ಸೌಹಾರ್ಧ ಬೆಸೆಯುವ ಕೆಲಸ ಕಾಂಗ್ರೆಸ್ ಮಾಡಲಿದೆ. ರೈತರು ದೇಶದ ಬೆನ್ನೆಲಬು. ರೈತರ ರಕ್ಷಣೆ ನಮ್ಮ ಹೊಣೆ. ಎಂಥದೇ ಸಂದರ್ಭದಲ್ಲೂ ನಿಮ್ಮ ಜೊತೆ ಇರುತ್ತೇವೆ ಎಂದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಇಂದು ಹಾವೇರಿಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರಿವರ್ತನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮೋದಿ ಸರ್ಕಾರ ಯುವಕರಿಗೆ ವಂಚಿಸಿದ್ದಾರೆ  ಮೇಕಿನ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ  ವೈಫಲ್ಯದಿಂದ ದೇಶದಲ್ಲಿ ಅತೀ ಹೆಚ್ಚು ನಿರುದ್ಯೋಗ ಉಂಟಾಗಿದೆ. 5 ರೀತಿಯ ತೆರಿಗೆ ಜಿಎಸ್ಟಿಯನ್ನು ಸರಳೀಕೃತಗೊಳಿಸಿ ಒಂದೇ ರೀತಿಯ ತೆರಿಗೆ ಪದ್ಧತಿ ಅಧಿಕಾರಕ್ಕೆ ಬಂದಲ್ಲಿ ನೀಡುತ್ತೇವೆ ಎಂದು ಹೇಳಿದರು.

ಮಹಿಳೆಯರ ಸಶಕ್ತೀಕರಣ:

ಮಹಿಳೆಯರ ಸಶಕ್ತೀಕರಣಕ್ಕಾಗಿ ದೇಶದ ಮಹಿಳೆಯರಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ.33 ಮೀಸಲಾತಿ ನೀಡುತ್ತೇವೆ. ಅಧಿಕಾರಕ್ಕೆ ಬಂದಮೇಲೆ ಇವೇ ನಮ್ಮ ಆಧ್ಯತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿಯವರು ರಾಜ್ಯಕ್ಕೆ ಬಂದಾಗ ರಾಜ್ಯ ಸರ್ಕಾರ ರೈತರಿಗೆ ಲಾಲಿಪಾಪ್ ಕೊಡುತ್ತದೆ ಎಂದು ವ್ಯಂಗ್ಯವಾಡಿದ್ದರು. ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ಕೊಟ್ಟ ಭರವಸೆಯಂತೆ ನಡೆದುಕೊಂಡಿದೆ. ದೇಶದಲ್ಲಿ 40 ವರ್ಷದಲ್ಲೇ ಅತೀ ಹೆಚ್ಚು ನಿರುದ್ಯೋಗ ಉಂಟಾಗಿದೆ. ಮೋದಿಯವರು ಯುವಕರಿಗೆ ಮೋಸ ಮಾಡಿದ್ದಾರೆ.ವರ್ಷಕ್ಕೆ 2 ಕೋಟಿ ಉದ್ಯೋಗದ ನಿರೀಕ್ಷೆ ಮೋದಿಯಿಂದ ಸಾಧ್ಯವೇ? ಎಂದು ಮೋದಿಯನ್ನು ರಾಹುಲ್ ಗಾಂಧಿ ಪ್ರಶ್ನಿಸಿದರು.

ಕಪ್ಪು ಹಣ ನಿಯಂತ್ರಣಕ್ಕಾಗಿ ನೋಟು ರದ್ಧತಿ ಮಾಡಲಾಯಿತು. ಈ ವೇಳೆ ಸಾಲಿನಲ್ಲಿ ಯಾರು ನಿಂತಿದ್ದವರು. ಅನಿಲ್ ಅಂಬಾನಿ ಇದ್ದರಾ? ನೀರವ್ ಮೋದಿ ಇದ್ದರಾ? ವಿಜಯ ಮಲ್ಯ ಇದ್ದರಾ? ಯಾರು ನಿಂತಿದ್ದರು…. ನಿಂತಿದ್ದು ದೇಶದ ಬಡ ಜನರು. ಇವರ ಹಣವನ್ನ ತೆಗೆದುಕೊಂಡು ಮೋದಿಯವರು ಉದ್ಯಮಿಗಳಿಗೆ ಪರೋಕ್ಷವಾಗಿ ನೀಡಿದ್ದಾರೆ ಎಂದು ಹೇಳಿದರು.

ಚುನಾವಣೆಗೆ ಮೊದಲು ಹೇಳಿದ್ದಿರಿ ನನ್ನ ಚೌಕಿದಾರ್ ಮಾಡಿ ಎಂದು. ರಫೆಲ್‌ ಮೂಲ ಒಪ್ಪಂದವನ್ನು ತಪ್ಪಿಸಿ ಗೆಳೆಯ ಅಂಬಾನಿಗೆ 30,000 ಕೋಟಿ ರೂ. ಲಾಭ ಮಾಡಿಕೊಡುವ ಉದ್ದೇಶ ನಿಮ್ಮದಾಗಿತ್ತು. ನೀವು ದೇಶದ ಚೌಕಿದಾರ ಆಗಲಿಲ್ಲ, ಅಂಬಾನಿ, ಅದಾನಿಯವರ ಚೌಕಿದಾರ ಆಗಿದ್ದೀರಿ ಎಂದು ಮೋದಿ ವಿರುದ್ಧ ತೀವ್ರವಾಗಿ ವಾಗ್ಧಾಳಿ ನಡೆಸಿದರು.

ಪುಲ್ವಾಮಾ ದಾಳಿಗೆ ಯಾರು ಹೊಣೆ?

ಪುಲ್ವಾಮ ದಾಳಿಗೆ ಹೊಣೆ ಯಾರು? ಮಸೂದ್ ಅಜರ್ ಅನ್ನು ಜೈಲಿನಿಂದ ಬಿಡಿಸಿ ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ದು ಯಾರು? ಇದನ್ನು ನೀವು ಯಾಕೆ ಮಾತನಾಡುತ್ತಿಲ್ಲ? ನಾವು ನಿಮ್ಮ ಹಾಗೆ ಅಲ್ಲ, ನಾವು ಯಾವತ್ತಿಗೂ ಭಯೋತ್ಪಾದನೆಗೆ ತಲೆ ಬಾಗುವುದಿಲ್ಲ ಎಂದರು.

ಸಂಸತ್ತಿನಲ್ಲಿ ನಾನು ಪ್ರಶ್ನಿಸಿದೆ:

ರಫೇಲ್ ಮೂಲ ಒಪ್ಪಂದ ಬಿಟ್ಟು ಅನಿಲ್ ಅಂಬಾನಿಗೆ ಕೊಟ್ಟಿದ್ದು ಯಾಕೆ? ಅಂಬಾನಿ ಕಂಪನಿಗೆ ಯುದ್ಧ ವಿಮಾನ‌ ತಯಾರಿಕೆಯ ಅನುಭವ ಏನಿದೆ? ಮೂಲ ಒಪ್ಪಂದದ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರೀದಿಸಿದ್ದು ಯಾಕೆ? ಎಂಬ ಪ್ರಶ್ನೆಗಳಿಗೆ

ಮೋದಿ ಪ್ರಶ್ನೆಗೆ ಉತ್ತರಿಸಲೇ ಇಲ್ಲ. ಇವುಗಳ ಕುರಿತು ಮೋದಿಗೆ ತಪ್ಪಿತಸ್ಥ ಭಾವನೆ ಇದೆ.

ಕಾಂಗ್ರೆಸ್ ಪಕ್ಷ ಐತಿಹಾಸಿಕ ಕ್ರಾಂತಿ ಮಾಡುತ್ತದೆ;

ಕ್ಷೀರ ಕ್ರಾಂತಿ, ಹಸಿರು ಕ್ರಾಂತಿ, ಔದ್ಯೋಗಿಕ ಕ್ರಾಂತಿ ಮಾಡಿದ ಕಾಂಗ್ರೆಸ್ ಮತ್ತೊಂದು ಕ್ರಾಂತಿಯ ಭರವಸೆ ಕೊಡುತ್ತೇವೆ. ದೇಶದ ಎಲ್ಲಾ ಬಡ ಜನರಿಗೂ ಕನಿಷ್ಟ ಆದಾಯದ ಭರವಸೆಯನ್ನು ನೀಡುತ್ತೇವೆ. ಕನಿಷ್ಠ ವರಮಾನ ಯೋಜನೆಯಿಂದ ಪ್ರತೀ ತಿಂಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಮೋದಿಯವರು ಕೆಲವೇ ಕೆಲವು ಉದ್ಯಮಿಗಳ ಖಾತೆಗೆ ಹಣ ಹಾಕಲು ಸಾಧ್ಯ ಎನ್ನುವುದಾದರೆ, ನಾವು ಬಡವರ ಖಾತೆಗೆ ಹಣ ಕೊಡಲು ಯಾಕೆ ಸಾಧ್ಯವಿಲ್ಲಾ? ನಾವು ಕೊಟ್ಟೇ ಕೊಡುತ್ತೇವೆ ಎಂದು ಬರವಸೆ ನೀಡಿದರು.

ಮೋದಿಯವರು ಭಾರತವನ್ನ ೨ ದೇಶ ಮಾಡಲು ಹೊರಟಿದ್ದಾರೆ:

ಮೋದಿಯವರು ಭಾರತವನ್ನ 2 ದೇಶವನ್ನಾಗಿ ಮಾಡಲು ಹೊರಟಿದ್ದಾರೆ. ಒಂದು ಅಂಬಾನಿ, ಅದಾನಿ, ನೀರವ್ ಮೋದಿ, ಮಲ್ಯರಂತಹ ಶ್ರೀಮಂತರ ದೇಶ. ಮತ್ತೊಂದು ಬಡ, ರೈತ, ಕಾರ್ಮಿಕ, ನಿರುದ್ಯೋಗಿಗಳ ದೇಶ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದೇ ದೇಶ ಇರಲಿದೆ. ಅದು ಎಲ್ಲರ ದೇಶ ಎಂದರು.

ಪ್ರಧಾನಿ ಮೋದಿ ಅವರು ರೈತರಿಗೆ ದಿನಕ್ಕೆ 3.50 ರೂ. ನೀಡುತ್ತಿದ್ದಾರೆ. ಆದರೆ, 15-20 ಕೈಗಾರಿಕೋದ್ಯಮಿಗಳ 3.5 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ. ರೈತರಿಗೆ ವಾರ್ಷಿಕ 6,000 ರೂ. ನೀಡುವ ಪ್ರಧಾನಿ, ಕಿಸಾನ್‌ ಸಮ್ಮಾನ್‌ ಯೋಜನೆಯು ಬಡ ಕೃಷಿಕರ ಕುರಿತಾಗಿ ಮಾಡಿದ ದೊಡ್ಡ ಅಪಹಾಸ್ಯ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಲೋಕಸಭಾ ಚುನಾವಣಾ ದಿನಾಂಕ ಪ್ರಕಟಣೆಗೆ ದಿನಗಣನೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1934ರಲ್ಲಿ ಮಹಾತ್ಮಗಾಂಧೀ ಭೇಟಿ ಸೇರಿದಂತೆ ಸ್ವಾತಂತ್ರ್ಯ ಚಳವಳಿ, ಅಹಿಂದ ಚಳವಳಿಯಂತಹ ಅನೇಕ ಘಟನೆಗಳಿಗೆ ಸಾಕ್ಷಿಯಾಗಿರುವ ಹಾಗೂ ಬಿಜೆಪಿ ಪಾಳಯವಾದ ಹಾವೇರಿಯಲ್ಲಿ ಕಾಂಗ್ರೆಸ್ ನ ಅಧ್ಯಕ್ಷರು ಮೊದಲ ಬಾರಿಗೆ ಬಹಿರಂಗ ಸಭೆಯ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಲೋಕಸಭೆಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವೀರಪ್ಪಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಪ್ರಚಾರ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಂಸದ ಕೆ.ಎಚ್.ಮುನಿಯಪ್ಪ, ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos