ರಫೇಲ್ ಮಾಹಿತಿಯಲ್ಲಿ ಇಡೀ ಪ್ಯಾರಾಗ್ರಾಫ್ ತಪ್ಪಾಗಲು ಹೇಗೆ ಸಾಧ್ಯ: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ರಫೇಲ್ ಮಾಹಿತಿಯಲ್ಲಿ ಇಡೀ ಪ್ಯಾರಾಗ್ರಾಫ್ ತಪ್ಪಾಗಲು ಹೇಗೆ ಸಾಧ್ಯ: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಆರ್ಡರ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬಳಿ ತಿದ್ದುಪಡಿಗೆ ಅವಕಾಶ ನೀಡಬೇಕು ಎಂದು ಕೇಂದ್ರ ಸರಕಾರ ಕೇಳಿಕೊಂಡ ಹಿನ್ನೆಲೆಯಲ್ಲಿ ವಿಪಕ್ಷ ಕಾಂಗ್ರೆಸ್ ಒತ್ತಡ ಹೇರುವುದು ಮುಂದುವರಿದಿದೆ.

“ಸಂಸತ್ ಸದಸ್ಯರು ಕೂತು ಕಡತಗಳನ್ನು ಪರಿಶೀಲಿಸಿದರೆ ಎಲ್ಲವೂ ಗೊತ್ತಾಗುತ್ತಾಗುತ್ತದೆ. ಆದ್ದರಿಂದ ನಮಗೆ ಜಂಟಿ ಸದನ ಸಮಿತಿ ರಚನೆ ಆಗಬೇಕು. ಬೋಫೋರ್ಸ್ ಹಾಗೂ ೨ಜಿ ಪ್ರಕರಣದಲ್ಲೂ ಜಂಟಿ ಸದನ ಸಮಿತಿ ರಚನೆ ಆಗಿತ್ತು. ಅಲ್ಲಿ ಮುದ್ರಣ ದೋಷ ಆಗಲು ಹೇಗೆ ಸಾಧ್ಯ? ಏನೋ ಒಂದು ಪದ ಅಂದರೆ ಅರ್ಥವಾಗುತ್ತದೆ, ಆದರೆ ಒಂದಿಡೀ ಪ್ಯಾರಾಗ್ರಾಫ್ ಮುದ್ರಣ ದೋಷವಾಗಲು ಸಾಧ್ಯವಿಲ್ಲ” ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಎಂದಿದ್ದಾರೆ.

ರಫೇಲ್ ತೀರ್ಪು: ರಫೇಲ್ ಯುದ್ಧ ವಿಮಾನ ವ್ಯವಹಾರದ ಆರ್ಡರ್ ಗೆ ಸಂಬಂಧಿಸಿದಂತೆ ಪ್ಯಾರಾಗ್ರಾಫ್ ನಲ್ಲಿ ತಿದ್ದುಪಡಿಗಾಗಿ ರಕ್ಷಣಾ ಸಚಿವಾಲಯ ಕಳೆದ ಶನಿವಾರ ಸುಪ್ರೀಂ ಕೋರ್ಟ್ ಎದುರು ಅರ್ಜಿ ಹಾಕಿಕೊಂಡಿದೆ. ಈ ಖರೀದಿ ವ್ಯವಹಾರದ ಬಗ್ಗೆ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ.

ಸುಪ್ರೀಂ ಕೋರ್ಟ್ ಗೆ ತಪ್ಪು ಮಾಹಿತಿ ನೀಡುವ ಮೂಲಕ ಸರಕಾರವು ದಾರಿ ತಪ್ಪಿಸಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ರಫೇಲ್ ದರದ ಬಗ್ಗೆ ಪಬ್ಲಿಕ್ ಅಕೌಂಟ್ಸ್ ಕಮಿಟಿ ಪರೀಕ್ಷಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾವೀಗ ಕೇಳುತ್ತಿದ್ದೇವೆ: ಸಿಎಜಿ ವರದಿ ಎಲ್ಲಿ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಬಿಜೆಪಿಯು ಸುಪ್ರೀಂ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದೆ. ಅದರ ಆಧಾರದಲ್ಲಿ ತೀರ್ಪು ಬಂದಿದೆ. ಆದ್ದರಿಂದ ಪಬ್ಲಿಕ್ ಅಕೌಂಟ್ಸ್ ಸಮಿತಿಯಿಂದ ಅಟಾರ್ನಿ ಜನರಲ್ ಹಾಗೂ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಜತೆ ಚರ್ಚೆ ನಿಗದಿ ಆಗಬೇಕು. ಕೋರ್ಟ್ ಗೆ ಅವರು ಹೇಳಿರುವಂತೆ ರಫೇಲ್ ಬಗ್ಗೆ ವರದಿಯನ್ನು ಸಂಸತ್ ಮುಂದೆ ಅವರು ಯಾವಾಗ ಮಂಡಿಸಿದ್ದಾರೆ ಎಂದು ಖರ್ಗೆ ಪ್ರಶ್ನೆಯಿಟ್ಟಿದ್ದಾರೆ.

ಆ ವರದಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಯಾವಾಗ ಬಂತು, ಅವರು ಯಾವಾಗ ಸಾಕ್ಷ್ಯ ನೀಡಿದರು ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನು ಸಂಸತ್ ಮುಂದೆ ಇಟ್ಟಿದ್ದು ಯಾವಾಗ ಎಂದು ತಿಳಿಸಬೇಕು ಎಂಬ ಸಾಲು ಸಾಲು ಸವಾಲುಗಳನ್ನು ಮಲ್ಲಿಕಾರ್ಜುನ ಖರ್ಗೆ ಕೇಳಿದ್ದಾರೆ.

ರಾಹುಲ್ ಗಾಂಧಿ ತಾಂತ್ರಿಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ವಿಷಯದ ಬಗ್ಗೆ ಹೇಳುತ್ತಿದ್ದೀನಿ. ಕೋರ್ಟ್ ತೀರ್ಪು ಮೂವತ್ನಾಲ್ಕು ಪ್ಯಾರಾ ಇದೆ. ಯಾವುದೆಲ್ಲ ಪ್ರಶ್ನೆ ಉದ್ಭವಿಸಿದೆಯೋ ಅದಕ್ಕೆ ಉತ್ತರವಿದೆ. ಒಂದು ವೇಳೆ ಅವರಿಗೆ (ರಾಹುಲ್) ರಾಜಕೀಯ ಮಾಡಲು ತಪ್ಪು ಕಂಡುಹಿಡಿಯಲೇ ಬೇಕು ಅಂದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos