ಮೊದಲ ಪಂದ್ಯದಲ್ಲಿ ಭರ್ಜರಿ ಸಾಧನೆ ಮಾಡಿದ ರಚಿನ್ ರವೀಂದ್ರ!

ಮೊದಲ ಪಂದ್ಯದಲ್ಲಿ ಭರ್ಜರಿ ಸಾಧನೆ ಮಾಡಿದ ರಚಿನ್ ರವೀಂದ್ರ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಒಂದು ಹೆಸರಾಂತ ಕ್ರೀಡೆಯಾಗಿದೆ. ಈ ಕ್ರೀಡೆಯನ್ನು ಚಿಕ್ಕ ಮಕ್ಕಳಿಂದ ಹಾಗೂ ದೊಡ್ಡ ಮಕ್ಕಳು ಸಹ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ.
4 ವರ್ಷಗಳ ಹಿಂದೆ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನ್ಯೂಜಿಲೆಂಡ್‌ ಅನ್ನು ಹಿಂದಿಕ್ಕಿ ಇಂಗ್ಲೆಂಡ್‌ ವಿಶ್ವಕಪ್‌ ಟ್ರೋಫಿಗೆ ಮುತ್ತಿಟ್ಟ ಕ್ಷಣಗಳನ್ನು ಕ್ರಿಕೆಟ್‌ ಅಭಿಮಾನಿಗಳು ಇನ್ನೂ ಮರೆತಿಲ್ಲ. ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತನ್ನ ಸೇಡನ್ನು ತೀರಿಸಿಕೊಂಡಿದೆ.
ಅಹಮದಾಬಾದ್ನಲ್ಲಿ ನಡೆದ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಯುವ ದಾಂಡಿಗ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ 82 ಎಸೆತಗಳಲ್ಲಿ ಶತಕ ಪೂರೈಸಿದರು.
ಇದರೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಶತಕ ಸಿಡಿಸಿದ ನ್ಯೂಝಿಲೆಂಡ್ನ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ 23 ವರ್ಷದ ರಚಿನ್ ರವೀಂದ್ರ ಪಾಲಾಯಿತು. ವಿಶೇಷ ಎಂದರೆ ರಚಿನ್ ಪೋಷಕರು ಮೂಲತಃ ಬೆಂಗಳೂರಿನವರು.
ನ್ಯೂಝಿಲೆಂಡ್ನಲ್ಲಿ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ದಂಪತಿ ಪುತ್ರ. 1990ರಲ್ಲಿ ನ್ಯೂಝಿಲೆಂಡ್ಗೆ ತೆರಳಿದ್ದ ರಚಿನ್ ಅವರ ತಂದೆ ಅಲ್ಲಿ ಹಟ್ ಹಾಕ್ಸ್ ಕ್ರಿಕೆಟ್ ಕ್ಲಬ್‌ ಅನ್ನು ಸ್ಥಾಪಿಸಿದ್ದರು.
ಅಲ್ಲಿಯೇ ಕ್ರಿಕೆಟ್ ಅನ್ನು ಕರಗತ ಮಾಡಿಕೊಂಡ ರಚಿನ್ ರವೀಂದ್ರ ಹಲವು ಬಾರಿ ಭಾರತದಲ್ಲಿ ಟೂರ್ನಿಗಳನ್ನು ಆಡಲು ಬಂದಿದ್ದಾರೆ. ಅಲ್ಲದೆ ಕೆಲ ಕ್ಲಬ್ಗಳ ವಿರುದ್ಧ ಆಡಿದ ಅನುಭವಗಳನ್ನು ಸಹ ಹೊಂದಿದ್ದಾರೆ. ಹೀಗಾಗಿಯೇ ಇಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಯುವ ಆಟಗಾರನಿಗೆ ಕಷ್ಟವಾಗಲಿಲ್ಲ ಎನ್ನಬಹುದು.
ಅಷ್ಟೇ ಅಲ್ಲದೆ ರಚಿನ್ ಅವರ ತಂದೆ ಟೀಮ್ ಇಂಡಿಯಾದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಹಾಗೂ ಕರ್ನಾಟಕದ ಕ್ರಿಕೆಟಿಗ ಜೆ ಅರುಣ್ ಕುಮಾರ್ ಅವರ ಒಡನಾಡಿ. ಇತ್ತ ತಂದೆಯ ಗೆಳೆಯರ ಕ್ರಿಕೆಟ್ ಸಲಹೆಗಳೊಂದಿಗೆ ರಚಿನ್ ಅತ್ಯುತ್ತಮ ಆಲ್ರೌಂಡರ್ ಆಗಿ ರೂಪುಗೊಂಡಿದ್ದಾರೆ.
ಅದರಂತೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 96 ಎಸೆತಗಳನ್ನು ಎದುರಿಸಿದ ರಚಿನ್ 5 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 123 ರನ್ ಬಾರಿಸಿ ಮಿಂಚಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos