ಹಿಂದಿ ಹೇರಿಕೆಗೆ ಕರವೇ ಪ್ರತಿಭಟನೆ

ಹಿಂದಿ ಹೇರಿಕೆಗೆ ಕರವೇ ಪ್ರತಿಭಟನೆ

ತುಮಕೂರು: ಕರ್ನಾಟಕ ಸೇರಿದಂತೆ ಹಿಂದಿಯೇತರ ರಾಜ್ಯಗಳಲ್ಲಿ ಒತ್ತಾಯ ಪೂರ್ವಕವಾಗಿ ಕೇಂದ್ರ ಸರ್ಕಾರ ನಡೆಸಿದ ಹಿಂದಿ ಸಪ್ತಾಹ ಕಾರ್ಯಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಉಪವಿಭಾಗಾಧಿಕಾರಿ ಅಜಯ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರವೇ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಕೆ.ಎನ್. ಮಂಜುನಾಥ್ ಗೌಡ ಮಾತನಾಡಿ, ಕೇಂದ್ರ ಸರ್ಕಾರ ಬಲವಂತವಾಗಿ ಆಯಾ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರುವ ಪ್ರಯತ್ನ ಮಾಡುತ್ತಿರುವುದನ್ನು ಖಂಡನೀಯ ಎಂದರು.

ಹಿಂದಿಯೇತರ ರಾಜ್ಯಗಳಲ್ಲಿ ಒತ್ತಾಯ ಪೂರ್ವಕವಾಗಿ ಹಿಂದಿ ಭಾಷೆ ಹೇರಲು ಮುಂದಾಗಿರುವ ಕೇಂದ್ರ ಸರ್ಕಾರ ತಕ್ಷಣದಿಂದಲೇ ತನ್ನದ ನಿಲುವನ್ನು ಬದಲಿಸಿಕೊಂಡು ಈ ವಿಚಾರವನ್ನು ಕೈ ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟಗಳು ಉಗ್ರ ಸ್ವರೂಪ ಪಡೆದುಕೊಳ್ಳಲಿವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ಉಪಾಧ್ಯಕ್ಷ ಕುಮಾರಣ್ಣ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಆನಂದ್, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಮೂರ್ತಿ, ಮಹದೇವಯ್ಯ, ಬಾಲು, ಮಂಜು, ರವಿ ಮತ್ತಿತರರು ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos