ಪ್ರಿಯಾಂಕಾ ಗಾಂಧಿ ಪ್ರಧಾನ ಕಾರ್ಯದರ್ಶಿಯನ್ನು ಸೇವೆಯಿಂದ ವಜಾಗೊಳಿಸಿದ ರಾಹುಲ್ ಗಾಂಧಿ

ಪ್ರಿಯಾಂಕಾ ಗಾಂಧಿ ಪ್ರಧಾನ ಕಾರ್ಯದರ್ಶಿಯನ್ನು ಸೇವೆಯಿಂದ  ವಜಾಗೊಳಿಸಿದ ರಾಹುಲ್ ಗಾಂಧಿ

ಲಕ್ನೋ: ಉತ್ತರಪ್ರದೇಶ ಪೂರ್ವ ವಿಭಾಗದ ಚುನಾವಣಾ ಉಸ್ತುವಾರಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕಾರ್ಯದರ್ಶಿಯನ್ನು ಸೇವೆಯಿಂದ ವಜಾಗೊಳಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆದೇಶಿಸಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಕಾರ್ಯದರ್ಶಿ ಕುಮಾರ್ ಆಶೀಶ್ ಅವರು ಈ ಹುದ್ದೆ ಪಡೆದ ಒಂದು ದಿನದಲ್ಲೇ ವಜಾಗೊಂಡಿದ್ದಾರೆ.

ಕುಮಾರ್ ವಿರುದ್ಧ ಅವ್ಯವಹಾರದ ಆರೋಪವಿರುವ ವರದಿ ಬಂದ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಈ ಕ್ರಮ ಜರುಗಿಸಿದ್ದಾರೆ ಎಂದು ಪಕ್ಷದ ಸಂಘಟನಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಪ್ರಕಟಿಸಿದ್ದಾರೆ.

ಕುಮಾರ್ ಆಶೀಶ್ ಅವರಿಂದ ತೆರವಾದ ಸ್ಥಾನಕ್ಕೆ ಸಚಿನ್ ನಾಯ್ಕ್ ಅವರನ್ನು ನೇಮಿಸಲಾಗಿದೆ. ಆಶೀಶ್ ಅವರು 2005ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಕಾಂಗ್ರೆಸ್ಸಿಗೆ ಮಾಹಿತಿ ಸಿಕ್ಕಿದೆ. ‘ಇದೆಲ್ಲವೂ ರಾಜಕೀಯ ಷಡ್ಯಂತ್ರ ಎಂದು ಆಶೀಶ್ ಅಲ್ಲಗೆಳೆದಿದ್ದಾರೆ. ನನ್ನ ವಿರುದ್ಧ ದೂರು ಬಂದಿದ್ದು ನಿಜ ಆದರೆ, ಯಾವ ದೋಷರೋಪಣಾ ಪಟ್ಟಿ ಸಲ್ಲಿಕೆಯಾಗಿಲ್ಲ’ ಎಂದಿದ್ದಾರೆ.

ಆದರೆ, ಕುಮಾರ್ ಆಶೀಶ್ ನೇಮಕವಾದ ಬಳಿಕ ಬಿಹಾರದ ಮುಖಂಡರು, ಕಾಂಗ್ರೆಸ್ ಹೈಕಮಾಂಡ್ ಬಳಿ ತೆರಳಿ, ಕುಮಾರ್ ವಿರುದ್ಧ ದೂರು ನೀಡಿದ್ದರು.

ಕುಮಾರ್ ನೇಮಕದಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಲಿದೆ. ವಿರೋಧ ಬಣಗಳಿಗೆ ಪ್ರಿಯಾಂಕಾ ಅವರನ್ನು ಗುರಿಯನ್ನಾಗಿಸಿಕೊಂಡು ನೆಗಟಿವ್ ಪ್ರಚಾರ ಕೈಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಕುಮಾರ್ ಅವರನ್ನು ವಜಾಗೊಳಿಸಿ ಎಂದು ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ, ರಾಹುಲ್ ಅವರು ತಕ್ಷಣವೇ ಕುಮಾರ್ ಅವರನ್ನು ವಜಾಗೊಳಿಸಿ ಸಚಿನ್ ಅವರನ್ನು ನೇಮಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos