ಲಸಿಕೆ ಉತ್ಪಾದನೆ ವೀಕ್ಷಿಸಿದ ಪ್ರಧಾನಿ ಮೋದಿ

ಲಸಿಕೆ ಉತ್ಪಾದನೆ ವೀಕ್ಷಿಸಿದ ಪ್ರಧಾನಿ ಮೋದಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಝೈಡಸ್ ಕ್ಯಾಡಿಲಾ ಲಸಿಕೆ ತಯಾರಕ ಸಂಸ್ಥೆಯ ಘಟಕಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಝೈಕೋವ್-ಡಿ ಕೊರೋನಾ ವೈರಸ್ ಲಸಿಕೆಯ ಅಭಿವೃದ್ಧಿ ಪ್ರಕ್ರಿಯೆಗಳನ್ನು ಪರಾಮರ್ಶಿಸಿದರು.
ಅಹಮದಾಬಾದ್ ನಗರದಿಂದ ೨೦ ಕಿಮೀ ದೂರದಲ್ಲಿರುವ ಚಾಂಗೋದರ್ ಕೈಗಾರಿಕಾ ಪ್ರದೇಶದಲ್ಲಿರುವ ಝೈಡಸ್ ಕ್ಯಾಡಿಲಾ ಪಾರ್ಕ್ಗೆ ಬೆಳಿಗ್ಗೆ ೯.೩೦ರ ಸುಮಾರಿಗೆ ಆಗಮಿಸಿದ ಅವರು, ಕೊರೋನಾ ವೈರಸ್ ಲಸಿಕೆ ತಯಾರಿಕೆ, ಅದರ ಸಂಗ್ರಹ, ವಿತರಣೆ ವಿಚಾರವಾಗಿ ಸುಮಾರು ಒಂದು ಗಂಟೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಡಿಎನ್‌ಎ ಆಧಾರಿತ ಸ್ವದೇಶಿ ಲಸಿಕೆಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಅಹಮದಾಬಾದ್‌ನ ಝೈಡಸ್ ಬಯೋಟೆಕ್ ಪಾರ್ಕ್ಗೆ ಭೇಟಿ ನೀಡಿದ್ದೆ. ಈ ಪ್ರಯತ್ನದ ಹಿಂದಿರುವ ತಂಡವನ್ನು ನಾನು ಶ್ಲಾಘಿಸುತ್ತೇನೆ. ಈ ಪ್ರಯಾಣದಲ್ಲಿ ಅವರಿಗೆ ಬೆಂಬಲವಾಗಿರಲು ಭಾರತ ಸರ್ಕಾರ ಸಕ್ರಿಯವಾಗಿ ಅವರೊಂದಿಗೆ ಕೆಲಸ ಮಾಡುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಝೈಕೋವ್-ಡಿ ಕೊರೊನಾ ವೈರಸ್ ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಪೂರ್ಣಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಎರಡನೆಯ ಹಂತದ ಪ್ರಯೋಗ ಆರಂಭಿಸಿರುವುದಾಗಿ ಝೈಡಸ್ ಕ್ಯಾಡಿಲಾ ಪ್ರಕಟಿಸಿತ್ತು. ಎರಡನೆಯ ಹಂತ ಮುಗಿದ ಬಳಿಕ ಮೂರನೇ ಮತ್ತು ಕೊನೆಯ ಹಂತದ ಪ್ರಯೋಗ ನಡೆಯಲಿದ್ದು, ಆ ವೇಳೆಗೆ ಲಸಿಕೆಯ ಗುಣಮಟ್ಟದ ಮತ್ತು ದಕ್ಷತೆಯ ಖಚಿತ ವಿವರ ಸಿಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos