ಪ್ರಚಾರ ಸಾಮಗ್ರಿಗಳ ಮುದ್ರಣಕ್ಕೆ ಪೂರ್ವಾನುಮತಿ ಕಡ್ಡಾಯ

ಪ್ರಚಾರ ಸಾಮಗ್ರಿಗಳ ಮುದ್ರಣಕ್ಕೆ ಪೂರ್ವಾನುಮತಿ ಕಡ್ಡಾಯ

ದೇವನಹಳ್ಳಿ, ಸೆ. 26: ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೊಸಕೋಟೆ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ವ್ಯಕ್ತಿಗಳ ವಿವರಗಳುಳ್ಳ ಭಿತ್ತಿ ಪತ್ರಗಳು, ಕರಪತ್ರಗಳು, ಮುಂತಾದ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಲು ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಚಪ್ಪರಕಲ್ಲು ಸರ್ಕಲ್ ಬಳಿ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಕೀರ್ಣದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಗೆ ಬರುವ ಎಲ್ಲಾ ಮುದ್ರಣಾಲಯಗಳ ಮಾಲೀಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚುನಾವಣೆಯ ಪ್ರಚಾರ ಸಾಮಗ್ರಿಗಳ ದರ ನಿಗದಿಪಡಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರಪತ್ರ ಸೇರಿದಂತೆ ಇತರೆ ಪ್ರಚಾರ ಪರಿಕರಗಳ ಮುದ್ರಣ ಶುಲ್ಕವನ್ನು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ನಿಗದಿಪಡಿಸಿದ ಚುನಾವಣಾ ವೆಚ್ಚದ ಮೊತ್ತಕ್ಕೆ ಸೇರಿಸಬೇಕಾಗಿದೆ. ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗೆ ತಿಳಿಯದೆ ಚುನಾವಣಾ ಪ್ರಚಾರ ಪರಿಕರಗಳು ಮುದ್ರಿಸಲ್ಪಟ್ಟಲ್ಲಿ ಅಂತಹ ಮುದ್ರಣಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಐಪಿಸಿ ಸೆಕ್ಷನ್ 171 ಹೆಚ್ ಕಾಯ್ದೆಯ ಪ್ರಕಾರ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಬಗ್ಗೆ ಪ್ರಕಟಣೆ ಹೊರಡಿಸುವ ವ್ಯಕ್ತಿಯ ಫೋಟೊ ಮತ್ತು ಹೆಸರನ್ನು ಮುದ್ರಿಸಬೇಕು. ಮುದ್ರಣ ಮಾಡಿಸುವ ವ್ಯಕ್ತಿಯು ನಾನೇ ಸದರಿ ಭಿತ್ತಿಪತ್ರಗಳನ್ನು ಹಾಗೂ ಇತರೆ ಪರಿಕರಗಳನ್ನು ಮುದ್ರಣ ಮಾಡಿಸುತ್ತೇನೆ ಎಂದು ಘೋಷಿಸಿ, ದೃಢೀಕರಿಸಿ ಹಾಗೂ ಇಬ್ಬರು ವ್ಯಕ್ತಿಗಳಿಂದಲೂ ಸಹ ದೃಢೀಕರಿಸಿರಬೇಕು. ಮುದ್ರಿಸಲ್ಪಟ್ಟ ಭಿತ್ತಿಪತ್ರ ಹಾಗೂ ಇತರೆ ಪರಿಕರಗಳ ಪ್ರತಿಯನ್ನು ಸಂಬಂಧಪಟ್ಟ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ, ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಬೇಕೆಂದರು.

ಭಿತ್ತಿಪತ್ರಗಳಲ್ಲಿ ಕಾನೂನುಬಾಹಿರ ವಿಷಯಗಳು ಅಥವಾ ಜಾತಿ, ಧರ್ಮ, ಪಂಗಡ, ಸಮುದಾಯ, ಭಾಷೆ, ವ್ಯಕ್ತಿತ್ವ ಮುಂತಾದವುಗಳನ್ನು ಪ್ರಚೋದಿಸುವ ವಿಚಾರಗಳನ್ನು ಪ್ರಕಟಣೆಗೊಳಿಸಿದರೆ ಅಂತಹವರ ವಿರುದ್ಧ ಕಾಯ್ದೆಯ ಅನ್ವಯ ಕ್ರಮ ಜರುಗಿಸಲಾಗುವುದು ಎಂದರು.

ಮುದ್ರಣಾಲಯಗಳ ಮಾಲೀಕರಿಗೆ ಅವರ ರಾಜಕೀಯ ಪಕ್ಷಗಳ, ಅಭ್ಯರ್ಥಿಗಳ ಪರ ಹ್ಯಾಂಡ್ ಬಿಲ್ಸ್, ಭಿತ್ತಿಪತ್ರಗಳು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ ಮುದ್ರಣ ಮಾಡಲಾಗಿದೆ ಎಂಬ ಖಚಿತ ಮಾಹಿತಿಯನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳ ಕಚೇರಿಗೆ ಮುದ್ರಿತ ನಾಲ್ಕು ಪ್ರತಿಗಳನ್ನು ಹಾಗೂ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ತಪ್ಪದೆ ಸಲ್ಲಿಸಬೇಕೆಂದು ಹೇಳಿದರು.

ಸಭೆಯಲ್ಲಿ ಜಿಲ್ಲೆಯ ಮುದ್ರಣಾಲಯಗಳ ಮಾಲೀಕರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos