ಟಿಕೆಟ್ ಕೈ ತಪ್ಪುವ ಆತಂಕ: ಯದುವೀರ್ ಕಾಲೆಳೆದ ಸಂಸದ ಪ್ರತಾಪ್ ಸಿಂಹ.

ಟಿಕೆಟ್ ಕೈ ತಪ್ಪುವ ಆತಂಕ: ಯದುವೀರ್ ಕಾಲೆಳೆದ ಸಂಸದ ಪ್ರತಾಪ್ ಸಿಂಹ.

ಮೈಸೂರು: ಹಾಲಿ ಸಂಸದ ಪ್ರತಾಪ್‌ಸಿಂಹಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿದ್ದು ಈ ಕುರಿತು ಸ್ವತಃ ಪ್ರತಾಪ್ ಸಿಂಹ ಅವರೇ ಸುಳಿವು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಈಗಲೂ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೂಡ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ಪಕ್ಷದ ಅಭ್ಯರ್ಥಿ ಪರ ಬಂಟಿಂಗ್ಸ್ ಬ್ಯಾನರ್ ಕಟ್ಟಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತೇನೆಂದು ಹೇಳುವ ಮೂಲಕ ಟಿಕೆಟ್ ಕೈ ತಪ್ಪಿರುವ ಕುರಿತು ಸುಳಿವು ನೀಡಿದರು.

ಯದುವೀರ್ ಟಿಕೆಟ್ ಕೊಡುವುದು ನಿಜವಾದದರೆ ಅದನ್ನು ಸ್ವಾಗತಿಸುತ್ತೇನೆ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ. ಅರಮನೆಯ ಎಸಿ ರೂಂ ನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೆ ಸ್ವಾಗತಿಸದೆ ಇರುವುದಕ್ಕೆ ಆಗುತ್ತಾ. ರಾಜ – ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಅದನ್ನೆಲ್ಲಾ ಜನರಿಗೆ ಬಿಟ್ಟು ಕೊಡಿಸುತ್ತಾರೆ. ಚಾಮುಂಡಿ ಬೆಟ್ಟದ ಮೇಲಿನ ಅರಮನೆ ಆವರಣದ ಒಳಗೆ  ಪೈಪ್ ಲೈನ್ ಹಾಕಲು ಅರಮನೆ ವಿರೋಧಿಸಿದೆ. ಯದುವೀರ್ ಜನಪ್ರತಿನಿಧಿ ಆದರೆ ಆ ಸಮಸ್ಯೆ ಬಗೆಹರಿಯುತ್ತೆ ಎಂದು ಟಾಂಗ್ ಕೊಟ್ಟರು.

ಅರಮನೆ ಒಳಗೆ ಅರಾಮಾಗಿ ಇದ್ದಂತ ವ್ಯಕ್ತಿ ಸಿದ್ದರಾಮಯ್ಯ ವಿರುದ್ದ ಹೋರಾಟ ಮಾಡಲು ಬೀದಿಗೆ ಬಂದರೆ ನಮಗೆ ಸಂತೋಷ. ಅರಮನೆ ವೈಭೋಗ ಬೇಕಾಗಿಲ್ಲ. ಜನರ ಜೊತೆ ಹೋರಾಟಕ್ಕೆ ಬರ್ತಿನಿ ಅಂತಾ ಹೊರಟಿದ್ದಾರೆ. ಅದಕ್ಕೆ ಸ್ವಾಗತ. ಪೊಲೀಸ್ ಠಾಣೆಗೆ ಬಂದು ನಮ್ಮ ಕಾರ್ಯಕರ್ತರ ಸಮಸ್ಯೆ ಬಗೆಹರಿಸಲು ರಾಜರು ಬಂದರೆ ಸಂತೋಷ ಅಲ್ವಾ? ಸುಖದ ಸುಪತ್ತಿಗೆಯಲ್ಲಿ ಇದ್ದ ನಮ್ಮ ಮಹಾರಾಜರನ್ನು ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ  ಎಂದು ಹೊಗಳಿದಂತೆ ವ್ಯಂಗದ ಮೂಲಕ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos