ಪ್ರಶಸ್ತಿಗಾಗೆ ಕೆರೆ ಹುಡುಕುತ್ತಿದೆ ಪಾಲಕೆ

ಪ್ರಶಸ್ತಿಗಾಗೆ ಕೆರೆ ಹುಡುಕುತ್ತಿದೆ ಪಾಲಕೆ

ಬೆಂಗಳೂರು, ನ. 20: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಕಡೆ ಕೆರೆ ಏರಿ, ಮತ್ತೂಂದು ಕಡೆ ಕೋಡಿ ಒಡೆದು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣ  ವಾಗುತ್ತಿರುವ ಬೆನ್ನಲ್ಲೇ, ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿನ ಅತ್ಯುತ್ತಮ ಕೆರೆಯೊಂದನ್ನು ಪ್ರಧಾನ ಮಂತ್ರಿಗಳ ಎಕ್ಸ್ಲೆನ್ಸ್ ಇನ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪ್ರಶಸ್ತಿಗೆ ಸಲ್ಲಿಸಲು ಸಜ್ಜುಗೊಳ್ಳುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳ ನಿರ್ವಹಣೆಗಾಗಿಯೇ 2019-2೦ನೇ ಸಾಲಿನಲ್ಲಿ 25 ಕೋಟಿ ರೂ. ಅನುದಾನ ಖರ್ಚು ಮಾಡಿತ್ತು. ಭಾರೀ ಮೊತ್ತದ ಅನುದಾನ ಮೀಸಲಿರಿಸಿದ ಹೊರತಾಗಿಯೂ, ಬಿಬಿಎಂಪಿ ಕೆರೆಗಳ ನಿರ್ವಹಣೆ ಮಾಡುವಲ್ಲಿ ಹಾಗೂ ಒತ್ತುವರಿ ತಡೆಯುವಲ್ಲಿ ವಿಫಲವಾಗುತ್ತಿದೆ ಎಂದು ಕೋರ್ಟ್ ಚಾಟಿ ಬೀಸುತ್ತಲೇ ಇದೆ. ಕೆರೆ ನಿರ್ವಹಣೆಯಲ್ಲಿ  ಹಿಂದಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕೆಲವು ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದೇವೆ ಎನ್ನುವುದು ಬಿಬಿಎಂಪಿ ಅಧಿಕಾರಿಗಳ ಮೊಂಡುವಾದವಾಗಿದೆ.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆಗೆ ಕೆರೆಗಳ ಸಮೀಕ್ಷೆ ಮತ್ತು ದಾಖಲೆಗಳನ್ನು ಸಲ್ಲಿಸುವ ಜವಾಬ್ದಾರಿಯನ್ನು ಪಾಲಿಕೆ ಅಧಿಕಾರಿಗಳು ನೀಡಿದ್ದಾರೆ. ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಬದಲಾವಣೆ ಗುರುತಿಸಿ, ಎಕ್ಸ್ಲೆನ್ಸ್ ಇನ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಗೆ ಬಿಬಿಎಂಪಿ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದು, ಪ್ರಶಸ್ತಿ ಪಡೆಯುವ ನಿರೀಕ್ಷೆಯಲ್ಲಿದೆ.

ಅಭಿವೃದ್ಧಿಯಾಗಿರುವ ಕೆರೆಗಳ ಆಯ್ಕೆ

ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಹೊಂದಿರುವ ಒಟ್ಟು 12 ಕೆರೆಗಳಲ್ಲಿ ಒಂದು ಕೆರೆ ಆಯ್ಕೆಗೆ ಬಿಬಿಎಂಪಿ ಮುಂದಾಗಿದೆ. 12 ಕೆರೆಗಳ ಪೈಕಿ ಒಂದು ಕೆರೆಯನ್ನು ಪ್ರಶಸ್ತಿಗೆ ಕಳುಹಿಸುವುದಕ್ಕೆ ಅಗತ್ಯ ಸಿದ್ಧತೆ ನಡೆಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 169 ಕೆರೆಗಳಿದ್ದು, 94 ಕೆರೆಗಳನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದೆ. 19 ಕೆರೆಗಳು ಅಭಿವೃದ್ಧಿ ಹಂತದಲ್ಲಿವೆ. 37 ಕೆರೆ ಅಭಿವೃದ್ಧಿಪಡಿಸಬೇಕಿದೆ. 19 ಕೆರೆಗಳು ಒತ್ತುವರಿಯಾಗಿರುವ ಕೆರೆಗಳ ಜಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಇನ್ನಿತರ ಉದ್ದೇಶಗಳಿಗಾಗಿ ಬಳಸಲಾಗಿದೆ.

ಯವ್ಯಾವಕೆರೆಗಳು

ಜಕ್ಕೂರು, ಯಲಹಂಕ, ಕಾಲೇನ ಅಗ್ರಹಾರ, ಕಲ್ಕೆರೆ, ಗರುಡಾಚಾರಪಾಳ್ಯ, ದೇವಿ ಬಿಸ್ತೇನಹಳ್ಳಿ, ಕೆಂಪಾAಬುದಿ ಕೆರೆ ಹಾಗೂ ಕೈಗೊಂಡನ ಹಳ್ಳಿ ಕೆರೆಗಳ ಸಮೀಕ್ಷೆ ನಡೆಸಲಾಗಿದೆ. ಗೊಟ್ಟಿಗೆರೆ, ಹೂಡಿ, ಸಾರಕ್ಕಿ ಹಾಗೂ ಹೊರಮಾವು ಕೆರೆಗಳ ಸಮೀಕ್ಷೆ ಕೆಲಸ ಪ್ರಗತಿಯಲ್ಲಿದೆ. 12 ಕೆರೆಗಳ ನೀರಿನ ಗುಣಮಟ್ಟ, ಕೆರೆ ಸುತ್ತಲಿನ ವನ್ಯ ಜೀವಿಗಳು ಹೆಚ್ಚಾಗಿರುವುದು, ಪಾದಚಾರಿ ಮಾರ್ಗ ಹಾಗೂ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿರುವ ಹಸಿರೀಕರಣವನ್ನೂ ಪ್ರಶಸ್ತಿ ಆಯ್ಕೆಗೆ ಪರಿಗಣಿ ಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲೆಗಾಗಿ 4.5 ಲಕ್ಷ

ನಗರದ 12 ಕೆರೆಗಳಲ್ಲಿ ಒಂದು ಕೆರೆ ಆಯ್ಕೆಗೆ ಬಿಬಿಎಂಪಿ ೪.೫ ಲಕ್ಷರೂ. ಖರ್ಚು ಮಾಡುತ್ತಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆಗೆ ಸಮೀಕ್ಷೆ ಮತ್ತು ದಾಖಲೆ ಸಲ್ಲಿಸುವ ಕೆಲಸಕ್ಕೆಂದೇ ಬಿಬಿಎಂಪಿ ಬರೋಬ್ಬರಿ 4.5 ಲಕ್ಷ ರೂ. ವ್ಯಯಿಸುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos