ಬಡವರ ಸಾಮೂಹಿಕ ಮದುವೆ ಭಾಗ್ಯ

ಬಡವರ ಸಾಮೂಹಿಕ ಮದುವೆ ಭಾಗ್ಯ

ಬೆಂಗಳೂರು, ಅ. 14: ರಾಜ್ಯದ ಬಡವರು, ಸಾಮಾನ್ಯರು ಯಾವುದೇ ಜಾತಿ ಭೇದವಿಲ್ಲದೆ, ಖರ್ಚಿಲ್ಲದೆ ಹಿಂದೂ ಸಂಪ್ರದಾಯದಂತೆ ಸರಳವಾಗಿ ವಿವಾಹವಾಗಲು ಮುಜರಾಯಿ ಇಲಾಖೆ ಸರಕಾರದ ವತಿಯಿಂದಲೇ ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ಯೋಜನೆ ಜಾರಿಗೆ ಸಜ್ಜಾಗಿದೆ.

ರಾಜ್ಯದ ಆಯ್ದ 100 ಎ  ದರ್ಜೆ ದೇಗುಲಗಳಲ್ಲಿ ಸರಕಾರದ ವತಿಯಿಂದ ವರ್ಷಕ್ಕೆ ಒಮ್ಮೆ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಿದೆ. ಎಂಟು ಗ್ರಾಂ ಚಿನ್ನದ ಮಾಂಗಲ್ಯ, ವಧು ಮತ್ತು ವರನಿಗೆ ವಿವಾಹ ವಸ್ತ್ರ ವಿತರಿಸುವ ಜತೆಗೆ ವಿವಾಹ ನೋಂದಣಿಯನ್ನು ಮಾಡಿಸಿ ನೀಡುವ ಬಗ್ಗೆ ಯೋಚಿಸಿದೆ. ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರ ನೇತೃತ್ವದಲ್ಲಿ ಸಚಿವರು, ಸಂಸದರು, ಶಾಸಕರು, ಇತರ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳನ್ನು ಒಗಹಗೂಡಿಸಿ ವರ್ಷದಲ್ಲಿ ಬರೋಬ್ಬರಿ 1000 ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಲು ಚಿಂತಿಸಿದೆ.

ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂ ಮೂಕಾಂಬಿಕಾ ದೇವಿ, ಮಲೆ ಮಹದೇಶ್ವರ, ಚಾಮುಂಡೇಶ್ವರಿ ದೇಗುಲ ಸಹಿತ ಆಯ್ದ 100 ದೇಗುಲಗಳನ್ನು ಸಾಮೂಹಿಕ ವಿವಾಹ ಆಯೋಜನೆಗೆ ಗುರುತಿಸಲಾಗುತ್ತದೆ. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಆಯಾ ದೇವಸ್ಥಾನದಲ್ಲಿ ಸಂಗ್ರಹವಾಗುವ ಆದಾಯ ದಿಂದಲೇ ಭರಿಸಲಾಗುತ್ತದೆ. ವೆಚ್ಚವನ್ನು ದೇಗುಲದಿಂದ ಭರಿಸಲು ಸಾಧ್ಯವಾಗದ ಕಡೆ ಇಲಾಖೆಯಿಂದಲೇ ಹಣ ನೀಡಿ ಸಾಮೂಹಿಕ ವಿವಾಹ ಆಯೋಜಿಸಲು ತೀರ್ಮಾನಿಸಿದೆ.

30 ಜಿಲ್ಲೆಗಳಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ 15 ದಿನಗಳಲ್ಲಿ ರಚನೆಯಾಗಲಿದೆ. ಜಿಲ್ಲಾ ಧಾರ್ಮಿಕ ಪರಿಷತ್ತಿಗೆ ಸ್ಥಳೀಯ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರಲಿದ್ದು, ಅವರ ನೇತೃತ್ವದಲ್ಲೇ ಸಾಮೂಹಿಕ ವಿವಾಹ ನಡೆಯಲಿದೆ.

ಧರ್ಮಸ್ಥಳದ ಮಾದರಿ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜಿತ ರೀತಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಸಾಮೂಹಿಕ ವಿವಾಹ ಆಯೋಜಿಸಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರು, ಸಾಮಾನ್ಯರು ಆರ್ಥಿಕ ಹೊರೆಯಿಲ್ಲದೆ ಸರಳವಾಗಿ ಹಿಂದೂ ಸಂಪ್ರದಾಯದಂತೆ ವಿವಾಹ ವಾಗಲು ಅನುಕೂಲವಾಗುವಂತೆ ಇಲಾಖೆಯಿಂದಲೇ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದೆ. ಯಾವುದೇ ಜಾತಿ ಭೇದವಿಲ್ಲದೆ ಆಯ್ದ 100 ಎ ದರ್ಜೆ ದೇಗುಲಗಳಲ್ಲಿ ವರ್ಷದಲ್ಲಿ 1000 ಜೋಡಿಗಳ ವಿವಾಹ ನಡೆಸುವ ಗುರಿ ಹೊಂದಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos