ಮಾಯ ಮಂತ್ರದ ಪೊಟ್ಟಣ

ಮಾಯ ಮಂತ್ರದ ಪೊಟ್ಟಣ

ಬಾದ್‌ಷಾ ಅಕ್ಬರನ ಆಸ್ಥಾನದಲ್ಲಿ ಒಡ್ಡೋಲಗ ನಡೆದಿತ್ತು. ತುಂಬಿದ ಸಭೆಯಲ್ಲಿ ಒಬ್ಬ ಬ್ರಾಹ್ಮಣ ಬಂದು “ಪ್ರಭೂ, ನಾನು ಬಂಗಾಲ ದೇಶದಿಂದ ಬಂದಿದ್ದೇನೆ. ತಮ್ಮ ರಾಜ್ಯ ಹಾಗೂ ಪ್ರಜೆಗಳ ಶ್ರೇಯೋಭಿವೃದ್ಧಿಗಾಗಿ ಪೂಜೆ ಮಾಡಿಸಿಕೊಂಡು ಪ್ರಸಾದ ತಂದಿದ್ದೇನೆ ಸ್ವೀಕರಿಸಿ’ ಎಂದು ಅಕ್ಷತೆ ಹಾಗೂ ಭಸ್ಮಗಳ ಪೊಟ್ಟಣ ನೀಡಿದ.

ಅಕ್ಬರ್‌ ತಕ್ಷಣ ಬೀರಬಲ್‌ನ ಪೀಠದೆಡೆಗೆ ನೋಡಿದ. ಅನಾರೋಗ್ಯದ ದೆಸೆಯಿಂದ ಬೀರಬಲ್‌ ಇನ್ನೂ ಆಗಮಿಸಿರಲಿಲ್ಲ. ಮಹಾರಾಜನಿಗೆ ಆ ಬ್ರಾಹ್ಮಣನ ಮಾತಿನಲ್ಲಿ ನಂಬಿಕೆ ಬರಲಿಲ್ಲ. ನಮ್ಮ ರಾಜ್ಯ ಸುಟ್ಟು ನಾಶವಾಗಲೆಂದೇ ಮಾಟ ಮಾಡಿ ಭಸ್ಮ ತಂದಂತಿದೆ ಎಂದು ತಿಳಿದು ಪೊಟ್ಟಣಗಳನ್ನು ದೂರ ಎಸೆದು ಭಟರ ಕೈಲಿ ಅವನನ್ನು ಹೊರತಳ್ಳಿಸಿದ.

ನಂತರ ಒಬ್ಬ ಫ‌ಕೀರ ಬಂದು “ಹುಜೂರ್‌, ಇದು ಸಬ್‌-ಜಾ-ಕಸ್ತೂರಿ’ ಎಂಬ ಅಪರೂಪದ ವನಸ್ಪತಿ. ಕಾಬೂಲಿನಿಂದ ಕಷ್ಟಪಟ್ಟು ಹುಡುಕಿ ತಂದಿದ್ದೇನೆ. ತಮ್ಮ ಆರೋಗ್ಯ ಇದರಿಂದ ದುಪ್ಪಟ್ಟು ವೃದ್ಧಿಯಾಗುತ್ತದೆ.’ ಎಂದು ದಕ್ಷಿಣೆ ಆಸೆಗಾಗಿ ನಿಂತನು. ಅಕºರನಿಗೆ ಮಹದಾನಂದವಾಯಿತು. ಪೊಟ್ಟಣವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಫ‌ಕೀರನಿಗೆ 50 ಬಂಗಾರದ ನಾಣ್ಯಗಳನ್ನು ಕೊಟ್ಟು ಕಳುಹಿಸಿದ. ಇದೇ ವೇಳೆಗೆ ಆಸ್ಥಾನಕ್ಕೆ ಆಗಮಿಸುತ್ತಿದ್ದ ಬೀರಬಲನಿಗೆ ಅರಮನೆಯ ಹೊರಗೆ ಭಟರಿಂದ ಹೊರತಳ್ಳಲ್ಪಟ್ಟಿದ್ದ ವಿದ್ವಾಂಸ ಸಿಕ್ಕ. ಬೀರಬಲ್‌ ಅವನ ಕುಶಲೋಪರಿ ವಿಚಾರಿಸಿ ನಡೆದಿದ್ದೆಲ್ಲವನ್ನೂ ತಿಳಿದುಕೊಂಡ. ಅವನನ್ನು ಅಕºರ್‌ ಎದುರು ಕರೆತಂದು ನಿಲ್ಲಿಸಿದ.

ಅವನನ್ನು ಯಾಕೆ ಕರೆ ತಂದಿರಿ ಎಂದು ಅಕºರ್‌ ಕೇಳಿದಾಗ ಬೀರಬಲ ಹೇಳಿದ, “ನಾಡಿನ ಕ್ಷೇಮಕ್ಕಾಗಿ ಈ ವ್ಯಕ್ತಿ ಪೂಜೆ ಮಾಡಿಸಿ ಪ್ರಸಾದ ತಂದಿದ್ದನ್ನು ಎಸೆದಿರಿ. ಅದೇ ಸಬ್‌ ಜಾ ಕಸ್ತೂರಿ ತಂದ ಫ‌ಕೀರನಿಗೆ ಬಂಗಾರ ನಾಣ್ಯ ನೀಡಿ ಸನ್ಮಾನಿಸಿದಿರಿ. ನಿಮಗೇ ಅರ್ಥವಾಗುವಂತೆ ಸಬ್‌ಜಾ ಎಂದರೆ ಹಿಂದಿಯಲ್ಲಿ ಎಲ್ಲವೂ ಹೋಗಲಿ ಎಂದರ್ಥ. ನಿಜಕ್ಕೂ ನೀವು ಮೋಸ ಹೋದಿರಿ!’

ಬಾದಷಹನಿಗೆ ಮೈ ಅದುರಿದಂತಾಯಿತು. ತಕ್ಷಣ ಕಸ್ತೂರಿ ಪೊಟ್ಟಣವನ್ನು ಕೆಳಗೆಸೆದ. ದೂರ ಎಸೆದಿದ್ದ ಅಕ್ಷತೆ, ಭಸ್ಮ, ಪ್ರಸಾದದ ಪೊಟ್ಟಣವನ್ನು ಎತ್ತಿಕೊಂಡು ಕಣ್ಣಿಗೊತ್ತಿಕೊಂಡ. ಅದನ್ನು ತಂದ ವಿದ್ವಾಂಸನಿಗೆ 100 ಬಂಗಾರದ ನಾಣ್ಯಗಳನ್ನು ಕೊಟ್ಟು ಕ್ಷಮೆಯಾಚಿಸಿ, ಶಾಲು ಹೊದೆಸಿ ಸನ್ಮಾನಿಸಿದ.

ಫ್ರೆಶ್ ನ್ಯೂಸ್

Latest Posts

Featured Videos