ಪ್ಲಾಸ್ಟಿಕ್ ವಿರುದ್ಧ ದಾಳಿಗಿಳಿದ ಪಾಲಿಕೆ

ಪ್ಲಾಸ್ಟಿಕ್ ವಿರುದ್ಧ ದಾಳಿಗಿಳಿದ ಪಾಲಿಕೆ

ಬೆಂಗಳೂರು, ಜೂ. 18: ಪ್ಲಾಸ್ಟಿಕ್ ಮುಕ್ತ ಬೆಂಗಳೂರಿಗೆ ಪಣ ತೊಟ್ಟಿರುವ ಪಾಲಿಕೆ ಇಂದು ಬೊಮ್ಮನಹಳ್ಳಿ ವಲಯದ 16 ವಾರ್ಡುಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡುವ ಕಾರ್ಯಕ್ಕೆ ಮುಂದಾಯಿತು.

ಬೊಮ್ಮನಹಳ್ಳಿಯ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ  ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗು ಸಿಬ್ಬಂದಿ ಪ್ಲಾಸ್ಟಿಕ್ ವಸ್ತುಗಳಿದ್ದ ಅಂಗಡಿಗಳಿಗೆ ದಾಳಿ ನಡೆಸಿ ವಶಕ್ಕೆ ಪಡೆಯುವ ಜತೆಗೆ ಸ್ಥಳದಲ್ಲೇ 22 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದರು. ಕೆಲ ಅಂಗಡಿಗಳ ಬಾಗಿಲು ಮುಚ್ಚಿಸಿದರು. ಇದರಿಂದ ಭಯಭೀತರಾದ ಕೆಲ ಅಂಗಡಿ ಮಾಲೀಕರು ಪ್ಲಾಸ್ಟಿಕ್ ವಸ್ತುಗಳು ಅಧಿಕಾರಿಗಳ ಕಣ್ಣಿಗೆ ಕಾಣದಂತೆ ಅಡಗಿಸಿಡುವ ಯತ್ನ ಮಾಡಿದರು.

ಪಿಜಿಯಲ್ಲಿ ಕೊಳೆತ ಆಹಾರ: ದಾಳಿ ವೇಳೆ ಪಿಜಿಯೊಂದಕ್ಕೆ ಭೇಟಿ ನೀಡಿದಾಗ ಕೊಳೆತ ಆಹಾರವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಡಲಾಗಿತ್ತು. ಊಟದ ಹಾಲ್ ನಲ್ಲೇ ಇಡಲಾಗಿದ್ದ ಚೀಲಗಳಿಂದ ಗಬ್ಬು ವಾಸನೆ ಬೀರುತ್ತಿದ್ದರೂ, ಅದನ್ನು ವಿಲೇವಾರಿ ಮಾಡಿರಲಿಲ್ಲ, ಕಾರಣ ಕೇಳಿದ್ದಕ್ಕೆ ಪಿಜಿ ಮಾಲೀಕರಿಂದ ಮೌನವೇ ಉತ್ತರವಾಗಿತ್ತು! ಇದಕ್ಕೆ ಕೊಪಿತಗೊಂಡ ಪಾಲಿಕೆ ಜಂಟಿ ಆಯುಕ್ತೆ ಸೌಜನ್ಯ 10 ಸಾವಿರ ರೂಪಾಯಿ ದಂಡ ವಿಧಿಸಿದರು.

ತಳ್ಳುಗಾಡಿವನಿಗೆ ಸನ್ಮಾನ: ತಳ್ಳು ಗಾಡಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ ಪೇಪರ್ ಚೀಲ ಬಳಸುತ್ತಿದ್ದುದನ್ನು ಕಂಡು, ಕಾರ್ಯಾಚರಣೆಯಲ್ಲಿದ್ದ ಶಾಸಕ ಸತೀಶ್ ರೆಡ್ಡಿ ಆ ವ್ಯಕ್ತಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದರು. ಬೀದಿ ಬದಿ ವ್ಯಾಪಾರಿಗಳಿಗೆ ಇರುವ ಕನಿಷ್ಟ ಕಾಳಜಿ ದೊಡ್ಡ ವ್ಯಾಪಾರಸ್ಥರಿಗೆ ಇಲ್ಲವಾಯಿತೇ ಎಂದು ಶಾಸಕರು ಬೇಸರಿಸಿದರು.

‘ತಮಿಳುನಾಡಿನಲ್ಲಿ ಪ್ಲಾಸ್ಟಿಕ್ ನಿಷೇಧ ಯಶಸ್ವಿಯಾಗಿದೆ, ನಮ್ಮಲ್ಲಿ ವ್ಯಾಪಾರಸ್ಥರು ಹಾಗು ಸಾರ್ವಜನಿಕರು ಪಾಲಿಕೆಯ ಜತೆ ಸಹಕರಿಸುತ್ತಿಲ್ಲ, ಎಚ್ಚರಿಕೆಯ ನಂತರವೂ ಪ್ಲಾಸ್ಟಿಕ್ ಬಳಸಿದ್ದಲ್ಲಿ 2.5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದ್ದು, ಅದರಂತೆ ಮಾಡಬೇಕಾಗುತ್ತದೆ, ಜತೆಗೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನಾ ಘಟಕಗಳ ಮೇಲೂ ದಾಳಿ ನಡೆಸುತ್ತೇವೆ’ ಎನ್ನುತ್ತಾರೆ ಜಂಟಿ ಆಯುಕ್ತೆ ಸೌಜನ್ಯ.

3 ವರ್ಷಗಳಿಂದಲೂ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಪ್ರಯತ್ನಿಸಿದರೂ ನಿರೀಕ್ಷಿತ ಫಲ ಸಿಕ್ಕಿಲ್ಲ, ಇದಕ್ಕೆ ಎಲ್ಲರೂ ಸ್ವಯಂಸ್ಪೂರ್ತಿಯಿಂದ ಕೈಜೋಡಿಸಿದ್ದಲ್ಲಿ ಮಾತ್ರವೇ ಯಶಸ್ವಿಯಾಗಲು ಸಾಧ್ಯ, ವ್ಯಾಪಾರಸ್ಥರು ಹಾಗು ಸಾರ್ವಜನಿಕರು ಸಹಕಾರ ನೀಡಬೇಕೆಂದು’ ಶಾಸಕ ಸತೀಶ್ ರೆಡ್ಡಿ ಜನರಲ್ಲಿ ಮನವಿ ಮಾಡಿದರು. ಕಾರ್ಯಾಚರಣೆಯಲ್ಲಿ ಪಾಲಿಕೆ ಸದಸ್ಯರಾದ ಭಾರತಿ ರಾಮಚಂದ್ರ, ರಾಮಮೋಹನರಾಜ್ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos